ಕೈಕಂಬ: ವೈದ್ಯರ ನಿರ್ಲಕ್ಷ್ಯದಿಂದ ಮಗು ಬಲಿಯಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಗುರುಪುರ ಕೈಕಂಬದ ವಿಜಯಾ ನರ್ಸಿಂಗ್ ಹೋಮ್ನ ಮುಂಭಾಗ ಭಾನುವಾರ ಸಂಜೆ ನಡೆದಿದೆ.
ಘಟನೆಯ ವಿವರ: ಅದ್ಯಪಾಡಿ ಕೊಳಂಬೆ ನಿವಾಸಿ ಜಗದೀಶ್ ಅವರ ಪತ್ನಿ ತಾರಾವತಿ ಎಂಬವರಿಗೆ ಹೆರಿಗೆ ಬೇನೆ ಕಾಣಿಸಿಕೊಂಡ ಪರಿಣಾಮ ಅವರನ್ನು ಶನಿವಾರ ರಾತ್ರಿ 1ರ ಸುಮಾರಿಗೆ ಕೈಕಂಬದ ವಿಜಯ ನರ್ಸಿಂಗ್ ಹೋಂಗೆ ಕರೆತರಲಾಗಿದ್ದು, ಆಸ್ಪತ್ರೆಯ ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಆಗಮಿಸಿದ ವೈದ್ಯರು ಗರ್ಭಿಣಿಯನ್ನು ಪರಿಶೀಲಿಸಿ ಹೆರಿಗೆಗೆ ವ್ಯವಸ್ಥೆ ಮಾಡಿದ್ದಾರೆ. ಆದರೆ ಹೆರಿಗೆ ಕಷ್ಟವಾದ ಕಾರಣ ಮಗುವನ್ನು ವೈದ್ಯರು ಸಿಸೇರಿಯನ್ ಮೂಲಕ ಹೊರಗೆ ತೆಗೆದಿದ್ದರು. ಮಗುವಿನ ಸ್ಥಿತಿಯನ್ನು ಗಮನಿಸಿದ ವೈದ್ಯರು ಮಗುವಿಗೆ ವೈರಲ್ ಫಿವರ್ ಉಂಟಾಗಿದೆ ಎಂದು ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ತಿಳಿಸಿದ್ದರು. ಅದರಂತೆ ಮನೆಯವರು ಗರ್ಭಿಣಿ ಹಾಗೂ ಶಿಶುವನ್ನು ಕಂಕನಾಡಿ ಆಸ್ಪತ್ರೆಗೆ ದಾಖಲಿಸಲು ತೆರಳಿದ್ದರು. ಆದರೆ ಕಂಕನಾಡಿ ಆಸ್ಪತ್ರೆಯಲ್ಲಿ ತಕ್ಷಣ ಚಿಕಿತ್ಸೆ ಸಿಗಿಲ್ಲ ಎನ್ನಲಾಗಿದೆ.

ಕೊನೆಗೆ ಅರ್ಧ ಗಂಟೆ ಕಳೆದ ಬಳಿಕ ಅಲ್ಲಿನ ವೈದ್ಯರು ಮಗುವನ್ನು ಪರಿಶೀಲಿಸಿ, ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಇದರಿಂದ ಅಘಾತಗೊಂಡ ಮನೆಯವರು ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಆರೋಪಿಸಿದ್ದಾರೆ. ಇದರ ಮಾಹಿತಿ ಪಡೆದ ಅದ್ಯಪಾಡಿಯ ಸುಮಾರು 300ಕ್ಕೂ ಅಧಿಕ ಮಂದಿ ಆಸ್ಪತ್ರೆಯತ್ತ ಜಮಾಯಿಸಿ ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟಿದ್ದರು.
ಪ್ರತಿಭಟನಾಕಾರರ ಆರೋಪವಿಷ್ಟು:
ಮಗು ಸಾಯಲು ಆಸ್ಪತ್ರೆಯಲ್ಲಿನ ಮೂಲಭೂತ ಕೊರತೆ ಹಾಗೂ ನಿರ್ಲಕ್ಷ್ಯವೇ ಕಾರಣ. ಮೂಲಭೂತ ಕೊರತೆ ಇದೆ ಎಂದು ಗೊತ್ತಿದ್ದರೂ ಸಿಸೇರಿಯನ್ ಮಾಡಿಸಿದ್ದು ಯಾಕೆ? ಅಲ್ಲದೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಅಲ್ಲಿನ ಸಿಬ್ಬಂದಿ ಸುಮಾರು ಹೊತ್ತು ಕಾಯಿಸಿದ್ದಾರೆ. ಮಗು-ಬಾಣಂತಿಯನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ವ್ಯವಸ್ಥೆ ಮಾಡಿದ್ದರೆ ಮಗು ಬದುಕುವ ಸಾಧ್ಯತೆ ಇತ್ತು. ಈ ಹಿಂದೆಯೂ ಹಲವಾರು ಮಗು-ಬಾಣಂತಿ ಮೃತಪಟ್ಟ ಘಟನೆ ನಡೆದಿದೆ. ಇದು ಅದರ ಮುಂದುವರಿದ ಭಾಗವಾಗಿದೆ ಎಂದೆಲ್ಲಾ ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಪೊಲೀಸರು ವೈದ್ಯರು ಹಾಗೂ ಮನೆಯವರೊಂದಿಗೆ ಮಾತಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಪೊಲೀಸರು ಪ್ರತಿಭಟನಾಕಾರರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
`ಆಸ್ಪತ್ರೆಯಿಂದ ಯಾವುದೇ ತಪ್ಪು ನಡೆದಿಲ್ಲ’
ಹೆರಿಗೆ ಬೇನೆ ಎಂದು ಬಂದಿದ್ದ ಮಹಿಳೆಗೆ ನೀಡಬೇಕಾದ ಎಲ್ಲಾ ಚಿಕಿತ್ಸೆಯನ್ನು ನೀಡಿದ್ದು, ವೈದ್ಯರಿಂದ ಯಾವುದೇ ಲೋಪ ನಡೆದಿಲ್ಲ. ಬೆಳಿಗ್ಗೆ 8.30ಕ್ಕೆ ಹೆರಿಗೆ ಬೇನೆ ಕಾಣಿಸಿತ್ತು. ಮಧ್ಯಾಹ್ನದವರೆಗೂ ಮಗು ಹೊರಬರಲಾರದ ಕಾರಣ ಮಹಿಳೆಯ ಗಂಡನ ಅನುಮತಿ ಪಡೆದು ಮಹಿಳೆಗೆ ಆಪರೇಶನ್ ಮಾಡಿಸಿ ಮಗುವನ್ನು ಹೊರತರಲಾಗಿತ್ತು. ನವಜಾತ ಶಿಶುವಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಲಿಲ್ಲ. ಮಗು ಹುಟ್ಟುತ್ತಿದ್ದಂತೆ ಆಮ್ಲಜನಕ ನೀಡಲಾಗಿದ್ದು ಇದರ ಯಾವುದೇ ಕೊರತೆ ಇರಲಿಲ್ಲ. ಹೃದಯಬಡಿತ, ವಿಸರ್ಜನೆ ಎಲ್ಲವೂ ಚೆನ್ನಾಗಿ ನಡೆದಿದ್ದು, ಅಸಹಜ ಎನ್ನುವುದು ಯಾವುದೂ ನಡೆದಿಲ್ಲ. ಆದರೆ ದುರದೃಷ್ಟವಶಾತ್ ಮಗುವಿಗೆ ಜ್ವರ ಕಾಣಿಸಿಕೊಂಡ ಕಾರಣ ಮಗುವನ್ನು ಕಂಕನಾಡಿಯ ಫಾದರ್ಮುಲ್ಲರ್ ಆಸ್ಪತ್ರೆಗೆ ದಾಖಲಿಸುವಂತೆ ತಕ್ಷಣ ಸೂಕ್ತ ವ್ಯವಸ್ಥೆ ಮಾಡಿದ್ದೇವೆ. ಆದರೆ ಅಲ್ಲಿ ಬೆಡ್ ಖಾಲಿಯಾಗಿಲ್ಲ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದು, ಬಾಣಂತಿ ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲು ತೆರಳಿದ್ದರು. ಆದರೆ ಅಷ್ಟು ಹೊತ್ತಿಗೆ ಮಗು ಮೃತಪಟ್ಟಿದೆ. ಸಣ್ಣ ಮಗುವಿಗೆ ಜ್ವರದ ತೀವ್ರತೆ ತಾಳಲಾರದೆ ಮಗು ಮೃತಪಟ್ಟಿದೆ. ಗರ್ಭಿಣಿಗೆ 37 ವಾರ ತುಂಬಿದ್ದು, ಅವಧಿಗೆ ಮುಂಚಿತವಾಗಿಯೇ ನಡೆದ ಹೆರಿಗೆ ಇದಾಗಿದೆ. ಗರ್ಭಿಣಿಗೆ ನೀರು ಬಂದು ಹೆರಿಗೆ ಬೇನೆ ಕಾಣಿಸಿದ ಕಾರಣ ಹೆರಿಗೆ ಮಾಡಿಸಲಾಗಿದೆ. ಅಲ್ಲದೆ ಗರ್ಭಿ ಣಿಗೂ ಯಾವುದೇ ರೀತಿಯ ಕಫ, ಸಿಹಿಮೂತ್ರ ಯಾವುದೇ ಸಮಸ್ಯೆ ಇರಲಿಲ್ಲ. ಸೂಕ್ತ ರೀತಿಯಲ್ಲಿ ತಪಾಸಣೆ ನಡೆಸಿಯೇ ವ್ಯವಸ್ಥೆ ಮಾಡಲಾಗಿದ್ದು, ತನ್ನಿಂದಾಗಲೀ, ಆಸ್ಪತ್ರೆಯ ವತಿಯಿಂದಾಗಲೀ ಯಾವುದೇ ಪ್ರಮಾದ ನಡೆದಿಲ್ಲ ಕೆಲವೊಂದು ವದಂತಿ, ಗಾಳಿ ಸುದ್ದಿಯಿಂದ ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದಾರೆ. ಆದರೆ ಮನೆಯವರಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿದ್ದೇವೆ ಎಂದು ವೈದ್ಯೆ ಡಾ. ಮೇಘನಾ ತಿಳಿಸಿದ್ದಾರೆ.

