ಬಂಟ್ವಾಳ: ಮಾನವನ ಸಂವಹನ ಭಾಷೆ ಆರಂಭವಾಗುವ ಮೊದಲು ಚಿತ್ರಕಲೆ ಮೂಲಕ ಎಲ್ಲವೂ ಅಭಿವ್ಯಕ್ತಿಗೊಳ್ಳುತ್ತಿದ್ದು, ಚಿತ್ರಕಲೆಯಲ್ಲಿ ವರ್ಲಿ ಶೈಲಿಯು ಕಳೆದ 1970ರಲ್ಲಿ ಬೆಳಕಿಗೆ ಬಂದು ಪ್ರಸಕ್ತ ಜನಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಹೇಳಿದರು.
ತಾಲ್ಲೂಕಿನ ಬಿ.ಸಿ.ರೋಡ್ ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರದಲ್ಲಿ ಅಳವಡಿಸಲಾದ ವರ್ಲಿ ಭಿತ್ತಿ ಚಿತ್ರಣ ಅನಾವರಣ ಕಾರ್ಯಕ್ರಮ ಪ್ರಯುಕ್ತ ಶನಿವಾರ ಏರ್ಪಡಿಸಿದ್ದ ‘ಹೊಸ ಬಣ್ಣ ಹೊಸ ನೋಟ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೇ ವೇಳೆ ಇಲ್ಲಿನ ಕಚೇರಿಗೆ ಒಟ್ಟು 125 ಪುಸ್ತಕ ಸಹಿತ ಕಪಾಟು ಕೊಡುಗೆ ನೀಡುವುದಾಗಿ ಅವರು ಭರವಸೆ ನೀಡಿದರು. ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಶಿಕ್ಷಣ ಇಲಾಖೆಯು ಪರಿವರ್ತನೆಯ ಕಾಲಘಟ್ಟದಲ್ಲಿ ಹೊಸ ವಿಚಾರ ಮತ್ತುವಿನ್ಯಾಸಗಳಿಗೆ ತನ್ನನ್ನು ತೆರೆದುಕೊಂಡಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್. ಮಹಮ್ಮದ್, ಮಮತಾ ಡಿ.ಎಸ್.ಗಟ್ಟಿ, ಮಂಜುಳಾ ಮಾಧವ ಮಾವೆ ಮತ್ತಿತರರು ಶುಭ ಹಾರೈಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪದ್ಮಶ್ರೀ, ಸವಿತಾ, ಬೇಬಿ, ಜಿಲ್ಲಾ ಚಿತ್ರಕಲಾ ಸಂಘದ ಅಧ್ಯಕ್ಷ ಮಹಾಬಲ ಕುಲ, ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸ್ಥಳೀಯ ಸದಸ್ಯ ಮಹಮ್ಮದ್ ಇಕ್ಬಾಲ್, ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಕರುಣಾಕರ ರೈ, ಡಾ. ರಮೇಶಾನಂದ ಸೋಮಯಾಜಿ, ಪ್ರಮುಖರಾದ ಉಮಾನಾಥ ರೈ ಮೇರಾವು, ಶಿವಪ್ರಸಾದ್ ಶೆಟ್ಟಿ, ಕೆ..ರಮೇಶ್ ನಾಯಕ್ ರಾಯಿ, ರಾಷ್ಟ್ರೀಯ ತರಬೇತುದಾರ ಜೇಸಿ ರಾಜೇಂದ್ರ ಭಟ್ ಕೆ., ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ ಮತ್ತಿತರರು ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮನ್ವಯಾಧಿಕಾರಿ ರಾಜೇಶ್ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
