ಅಧಿಕಾರಿಗಳಿಗೆ ದಕ್ಷತೆ ಅಗತ್ಯ: ತುಂಗಪ್ಪ ಬಂಗೇರ
ಬಂಟ್ವಾಳ:ಗ್ರಾಮ ಪಂಚಾಯಿತಿನಲ್ಲಿ ಜನಸಾಮಾನ್ಯರಿಗೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡುವುದರ ಜೊತೆಗೆ ಕಾನೂನು ನೆಪವೊಡ್ಡುವ ಬದಲಾಗಿ ಮಾನವೀಯತೆ ಮೆರೆದು ಅಧಿಕಾರಿಗಳು ಭ್ರಷ್ಟಾಚಾರ ಇಲ್ಲದೆ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಂಗಬೆಟ್ಟು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದರು.
ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿನಲ್ಲಿ ಬುಧವಾರ ಏರ್ಪಡಿಸಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮಾಹಿತಿ ಮತ್ತು ಉದ್ಯೋಗ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 21ಸಾವಿರಕ್ಕೂ ಮಿಕ್ಕಿ ಮಂದಿ ಉದ್ಯೋಗ ಚೀಟಿ ಹೊಂದಿದ್ದು, ಉದ್ಯೋಗ ನಿರ್ವಹಣೆಯಲ್ಲಿ ನಿರೀಕ್ಷಿತ ಮಟ್ಟ ತಲುಪಿಲ್ಲ ಎಂದರು. ಗ್ರಾಮೀಣ ಪ್ರದೇಶದಲ್ಲಿ ತೋಟಗಾರಿಕೆ, ಮಲ್ಲಿಗೆ ಕೃಷಿ, ಹೈನುಗಾರಿಕೆಗೆ ಹಟ್ಟಿ ನಿರ್ಮಾಣ, ಬಾವಿ ರಚನೆ, ಕೆರೆ ಪುನಶ್ಚೇತನ, ಕೊಳವೆ ಬಾವಿ ಜಲ ಮರುಪೂರಣ, ವಸತಿ ನಿರ್ಮಾಣ ಮತ್ತಿತರ ಕಾಮಗಾರಿ ನಡೆಸುವಲ್ಲಿ ಉದ್ಯೋಗ ಚೀಟಿ ಸದ್ಬಳಕೆಯಾಗಬೇಕು ಎಂದು ತಿಳಿಸಿದರು.
ಆರೋಪ: ಇದೇ ವೇಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಮತ್ತು ಸದಸ್ಯ ರಾಘವ ಅಮೀನ್ ಪ್ರತಿಕ್ರಿಯಿಸಿ, ಇಲ್ಲಿನ ಪಿಡಿಒ ವೆಂಕಟೇಶ ಅವರು ಅರ್ಹ ಫಲಾನುಭವಿಗಳಿಗೆ ಉದ್ಯೋಗ ಚೀಟಿ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಾ ಪಂಚಾಯಿತಿ ಸದಸ್ಯರಿಗೂ ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಹಾಯಕ ಕೃಷಿ ನಿರ್ದೇಶಕ ಪಿ.ಎಫ್.ಮಿರಾಂದ ಉದ್ಯೋಗ ಖಾತರಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಕೆ.ನಾರಾಯಣ ಶೆಟ್ಟಿ, ಸಹಾಯಕ ಕೃಷಿ ಅಧಿಕಾರಿ ನಾರಾಯಣ ನಾಯ್ಕ, ಯೋಜನೆ ಸಹಾಯಕ ನಿರ್ದೇಶಕಿ ದಯಾವತಿ, ಎಂಜಿನಿಯರ್ ರಾಜ್‍ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಲ್ಲಿಕಾ, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಂಜುಳಾ ಸದಾನಂದ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪುಷ್ಪಲತಾ, ಸದಸ್ಯರಾದ ಜಗದೀಶ ಕೊಯಿಲ, ಪದ್ಮನಾಭ ಗೌಡ, ಶೋಭಾ ಎನ್.ಸಪಲ್ಯ, ಕುಸುಮಾ, ಮಾಜಿ ಅಧ್ಯಕ್ಷ ಜಿ.ದಾಮೋದರ ಬಂಗೇರ ಮತ್ತಿತರರು ಇದ್ದರು
