ಬಂಟ್ವಾಳ :ತಾಲೂಕಿನ ಉಳಿ ಗ್ರಾಮದ ಕಕ್ಯಪದವಿನ ಮೈರ ಬರ್ಕೆಜಾಲುನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ 4ನೇ ವರ್ಷದ ಹೊನಲು ಬೆಳಕಿನ ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಅದ್ದೂರಿ ಚಾಲನೆ ದೊರಕಿತು.
ಮುಂಬೈ ಉದ್ಯಮಿ, ಭವಾನಿ ಫೌಂಡೇಶನ್‍ನ ಅಧ್ಯಕ್ಷ ಕುಸುಮಾಧರ ಡಿ.ಶೆಟ್ಟಿ ಚೆಲ್ಲಡ್ಕ ಅವರು ಕಂಬಳಕ್ಕೆ ಚಾಲನೆ ನೀಡಿ ಮಾತನಾಡಿ ತುಳುನಾಡು ದೈವ-ದೇವರ ಆರಾಧನೆಯ ಬೀಡಾಗಿದ್ದು ಕಂಬಳವು ಆರಾಧನೆಯ ಭಾಗವಾಗಿದೆ. ಆಧುನಿಕತೆಯ ಸೋಂಕಿಲ್ಲದ ಗ್ರಾಮೀಣ ಸೊಗಡಿನ ಈ ಕ್ರೀಡೆ ನಮ್ಮ ತುಳುನಾಡಿನ ಸಂಸ್ಕ್ರತಿಯನ್ನು ಬಿಂಬಿಸುತ್ತಿದ್ದು ಕೃಷಿ ಹಾಗೂ ಕಂಬಳಕ್ಕೆ ಪ್ರಾಧಾನ್ಯತೆ ನೀಡುವ ಮೂಲಕ ತುಳುನಾಡಿನ ಜನತೆ ನಮ್ಮ ಮೂಲ ಸಂಸ್ಕ್ರತಿಯನ್ನು ಉಳಿಸಿ,ಬೆಳೆಸಬೇಕು.ಮೈರದಂತಹ ತೀರಾಗ್ರಾಮೀಣ ಪ್ರದೇಶದಲ್ಲೂ ಕಂಬಳವನ್ನು ಸಂಘಟಿಸಿದ ಶ್ರೀರಾಮಾಂಜನೇಯ ಗೆಳೆಯರ ಬಳಗದವರ ಶ್ರಮ ಅಭಿನಂದಾರ್ಹವಾಗಿದೆ ಎಂದು ಹೇಳಿದರು.

kambala  (1)

kambala  (2)ವಿಜ್ಞಾನ ಯುಗದಲ್ಲಿ ನಮ್ಮ ಸಂಸ್ಕ್ರತಿಯನ್ನು ಮರೆಯಬಾರದು. ಉತ್ಸವಗಳ ಮೂಲಕ ಊರ ಜನರು ಒಗ್ಗೂಡುವಂತಾಗಬೇಕು. ಗ್ರಾಮದ ಯುವಕರು ಒಂದಾದಲ್ಲಿ ಊರು ಬೆಳಗುತ್ತದೆ ಎಂಬುವುದಕ್ಕೆ ಮೈರ ಸಾಕ್ಷಿಯಾಗಿದೆ ಎಂದರು.
ನಮ್ಮ ಬಂಟ್ವಾಳ ಸಮೂಹ ಸಂಸ್ಥೆಯ ಪ್ರಶಾಂತ್ ಪುಂಜಾಲಕಟ್ಟೆ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಗಬೆಟ್ಟು ಜಿ.ಪಂ.ನೂತನ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಆರ್ಥಿಕ ಸಂಕಷ್ಟದ ನಡುವೆಯೂ ತುಳು ಜಾನಪದ ಕ್ರೀಡೆ ಕಂಬಳದ ಉಳಿವಿಗೆ ಸರ್ವರ ಸಹಕಾರ ಅಗತ್ಯ. ಉತ್ತಮ ಕಾರ್ಯಗಳಿಗೆ ಜನಬೆಂಬಲವಿದೆ ಎಂದು ಹೇಳಿದರು.
ಸ್ಥಳದಾನಿ ತುಕ್ರಪ್ಪ ಗೌಡ ಬರ್ಕೆಜಾಲು, ಕಂಬಳ ಹಿರಿಯ ಓಟಗಾರ ಜಯ ಶೆಟ್ಟಿ ಕಿಂಜಾಲು, ಕೇಪು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ , ಉಳಿ ಗ್ರಾ.ಪಂ.ಅಧ್ಯಕ್ಷೆ ದೀನಾಕ್ಷಿ ಮಲ್ಯೋಡಿ, ಸದಸ್ಯರಾದ ಚಿದಾನಂದ ರೈ ಕಕ್ಯ, ಚೇತನ್ ಊರ್ದೊಟ್ಟು, ಕಜೆಕಾರು ಸಿ.ಎ.ಬ್ಯಾಂಕ್ ಮಾಜಿ ಅಧ್ಯಕ್ಷ ಡೀಕಯ ಬಂಗೇರ, ಶ್ರೀ ಕ್ಷೇತ್ರ ಕಕ್ಯಬೀಡು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ ನಾಯಕ್ ಉಳಿ, ಪ್ರಗತಿಪರ ಕೃಷಿಕ ರಾಮಣ್ಣ ಅಡಪ ದಿಡಿಂಬಿಲ ಮತ್ತಿತರರು ಉಪಸ್ಥಿತರಿದ್ದರು.
ಗೆಳೆಯರ ಬಳಗದ ಅಧ್ಯಕ್ಷ ರಂಜಿತ್ ಮೈರ, ಕಾರ್ಯಾಧ್ಯಕ್ಷ ಲತೀಶ್ ಕುಕ್ಕಾಜೆ, ಪದಾಧಿಕಾರಿಗಳಾದ ಪುರುಷೋತ್ತಮ ಪೂಜಾರಿ ಮತ್ತು ಸುರೇಶ್ ಮೈರ, ಸದಸ್ಯರಾದ ಶಿವಾನಂದ, ರವಿ, ವಿವಿಧ ಸಮಿತಿ ಸಂಚಾಲಕರುಗಳು, ಪ್ರಧಾನ ತೀರ್ಪುಗಾರರಾದ ಎಂ.ರಾಜೀವ ಶೆಟ್ಟಿ ಎಡ್ತೂರು, ನಿರಂಜನ್ ರೈ ಕೋಡ್ಯಾಡಿ, ಉದ್ಘೋಷಕರಾದ ಸತೀಶ್ ಹೊಸ್ಮಾರು, ಮಹಾವೀರ ಜೈನ್, ಪ್ರಕಾಶ್ ಕರ್ಲ, ರಾಜಶೇಖರ್, ಕಂಬಳ ಕರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುದೀಶ್ ಕುಮಾರ್ , ಸಂಕಪ್ಪ ಶೆಟ್ಟಿ, ಶಶಿಧರ್ ಆಚಾರ್ಯ ಮತ್ತಿತರರು ಭಾಗವಹಿಸಿದ್ದರು.
ಕಂಬಳ ಸಮಿತಿಅಧ್ಯಕ್ಷ ಕೆ.ಹರೀಶ್ಚಂದ್ರ ಪೂಜಾರಿ ಅವರು ಸ್ವಾಗತಿಸಿ, ಪ್ರಸ್ತಾವಿಸಿದರು. ಪ್ರಶಾಂತ್ ಮೈರ ಅವರು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *