ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಳಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಗಳು ಇಲ್ಲಿನ ಹದಗೆಟ್ಟ ಗ್ರಾಮೀಣ ರಸ್ತೆಗಿಳಿದು ಸ್ವತಃ ‘ಶ್ರಮದಾನ’ ನಡೆಸುವ ಮೂಲಕ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಪಾಠ ಕಲಿಸಿದ ಘಟನೆ ಗುರುವಾರ ನಡೆದಿದೆ. ನರಿಕೊಂಬು ಗ್ರಾಮ ಪಂಚಾಯಿತಿನಲ್ಲಿ ಬುಧವಾರ ನಡೆದ ‘ಮಕ್ಕಳ ಗ್ರಾಮಸಭೆ’ಯಲ್ಲಿ ಇಲ್ಲಿನ ಕರ್ಬೆಟ್ಟು-ಬೋಳಂತೂರು ರಸ್ತೆಯನ್ನು ತ್ವರಿತವಾಗಿ ದುರಸ್ತಿಗೊಳಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ. ಇದೀಗ ಶಾಲೆ ಎದುರಿನ ರಸ್ತೆಗೆ ಮುಖ್ಯಶಿಕ್ಷಕಿ ಚಂದ್ರಾವತಿ ನೇತೃತ್ವದಲ್ಲಿ ಸುಮಾರು 50ಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳು ಸ್ವತಃ ರಸ್ತೆಗಿಳಿದು ಮಣ್ಣು ಮತ್ತು ಜೆಲ್ಲಿ ಹುಡಿ ಹಾಕುವ ಮೂಲಕ ಶ್ರಮದಾನ ನಡೆಸಿ ಗಮನ ಸೆಳೆದಿದ್ದಾರೆ.

21btl-Shramadan

21BTL-Bolanthur
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ಅಂತರ, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕಿಶೋರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ, ಶಿಕ್ಷಕಿಯರಾದ ಪ್ರೆಸಿಲ್ಲಾ ಎವ್ಲಿನ್ ಡಿಸೋಜ, ಟಿ.ಶರ್ಮಿಳಾ, ಕೆಲವೊಂದು ರಿಕ್ಷಾ ಚಾಲಕರು ಮತ್ತು ಮಕ್ಕಳ ಪೋಷಕರು ಕೂಡಾ ಶ್ರಮದಾನದಲ್ಲಿ ಪಾಲ್ಗೊಂಡರು.
ರಾಜಕೀಯ ಕೆಸರೆರಚಾಟ:
ಈ ಹಿಂದೆ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರಿಗೂ ರಸ್ತೆ ದುರಸ್ತಿ ಮತ್ತು ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮತ್ತು ಸ್ಥಳೀಯರು ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕಾಗಿ ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಬಹಿಷ್ಕರಿಸಲು ಮುಂದಾಗಿರುವುದಾಗಿ ಸ್ಥಳೀಯ ನಾಗರಿಕರು ಕೆಲವೆಡೆ ಬ್ಯಾನರ್ ಅಳವಡಿಸಿರುವುದು ಕಂಡು ಬಂದಿದೆ.
ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಇಲ್ಲಿಗೆ ಸಮೀಪದ ಪಾಣೆಮಂಗಳೂರು ನೆಹರೂ ನಗರ-ಕರ್ಬೆಟ್ಟು ರಸ್ತೆಯು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಡಾಂಬರೀಕರಣಗೊಂಡಿದೆ. ಈಚೆಗಷ್ಟೇ ಬ್ರಹ್ಮಕಲಶೋತ್ಸವ ನೆಪದಲ್ಲಿ ಇಲ್ಲಿಗೆ ಸಮೀಪದ ಶೇಡಿಗುರಿ-ನಾಟಿ ಬೀದಿ ರಸ್ತೆ ದುರಸ್ತಿ ಡಾಂಬರೀಕರಣ ಮತ್ತು ಕಾಂಕ್ರಟೀಕರಣಗೊಂಡಿದೆ. ಕೇವಲ ಎರಡೂವರೆ ಕಿ.ಮೀ.ಉದ್ದದ ಈ ರಸ್ತೆ ಮಾತ್ರ ತೇಪೆ ಡಾಂಬರೀಕರಣವೂ ಇಲ್ಲದೆ ತೀರಾ ನಿರ್ಲಕ್ಷ್ಯಕ್ಕೀಡಾಗಿದೆ. ಇದರಿಂದಾಗಿ ಇಲ್ಲಿನ ರಸ್ತೆಗೆ ಬರಲು ರಿಕ್ಷಾ ಚಾಲಕರು ಕೂಡಾ ಹಿಂದೇಟು ಹಾಕುತ್ತಿದ್ದಾರೆ. ಈ ರಸ್ತೆಯಲ್ಲಿ ವಾಹನ ಓಡಾಟ ವೇಳೆ ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಹರಡಿರುವ ಜೆಲ್ಲಿ ಕಲ್ಲು ಶಾಲಾ ಮಕ್ಕಳ ಮೇಲೆರಗಿ ಗಾಯ ಉಂಟು ಮಾಡುತ್ತಿದೆ. ಈಗಾಗಲೇ ಇದೇ ರಸ್ತೆಯಲ್ಲಿ ರಿಕ್ಷಾವೊಂದು ಉರುಳಿ ಬಿದ್ದ ಪರಿಣಾಮ ಇಲ್ಲಿನ ಶಿಕ್ಷಕಿಯೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಪರಿಣಾಮ ಇಲ್ಲಿಗೆ ಬೇರೆ ಶಿಕ್ಷಕರು ಕೂಡಾ ವರ್ಗಾವಣೆಗೊಂಡು ಬರಲು ಒಪ್ಪುತ್ತಿಲ್ಲ ಎಂದು ಮಕ್ಕಳ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ತಾಲ್ಲೂಕಿನಲ್ಲಿ ಇತರ ಗ್ರಾಮ ಪಂಚಾಯಿತಿಗೆ ಹೋಲಿಸಿದರೆ ರಾಷ್ಟ್ರೀಯ ಹೆದ್ದಾರಿ ಮತ್ತು ಬಂಟ್ವಾಳ ಪುರಸಭೆಗೆ ಸಮೀಪದಲ್ಲಿದ್ದು, ಎಎಂಆರ್ ಕಿರು ಜಲವಿದ್ಯುತ್ ಘಟಕದಂತಹ ಬಲಾಢ್ಯ ಉದ್ದಿಮೆ ಮತ್ತಿತರ ಆದಾಯ ಮೂಲ ಇದ್ದರೂ ಇಂತಹ ರಸ್ತೆ ದುರಸ್ತಿಗೆ ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಇಲ್ಲಿನ ನಾಗರಿಕರನ್ನು ಕಾಡುತ್ತಿದೆ.
ಆರಂಭದಲ್ಲಿ ನರಿಕೊಂಬು, ಶಂಭೂರು, ಬಾಳ್ತಿಲ ಗ್ರಾಮವನ್ನೊಳಗೊಂಡ ಮಂಡಲ ಪಂಚಾಯಿತಿನಲ್ಲಿ ಜನತಾದಳ ಮತ್ತು ಕಾಂಗ್ರೆಸ್ ಸಮ್ಮಿಶ್ರ ಆಡಳಿತ ನಡೆಸಿದ್ದರೆ, ಆ ಬಳಿಕ ಬಾಳ್ತಿಲ ಗ್ರಾಮ ಪ್ರತ್ಯೇಕಗೊಂಡು ಕಳೆದ 27ವರ್ಷಗಳ ಅವಧಿಯಲ್ಲಿ ತಲಾ ಎರಡು ಅವಧಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರದ ಗೆದ್ದುಗೆಗೆ ಏರಿದೆ. ಈ ಬಾರಿಯೂ ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಬಿಜೆಪಿ ಬಂಡಾಯ ಸದಸ್ಯರು ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿರುವುದು ಕಂಡು ಬಂದಿದೆ.
ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಸರ್ಕಾರದ ಜೈಕಾ ಯೋಜನೆಯಡಿ ರಸ್ತೆ ಸರ್ವೆ  ಕಾರ್ಯ ನಡೆಸಿ ಬಳಿಕ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಈ ರಸ್ತೆಯನ್ನು ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಸೇರಿಸಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಮನವರಿಕೆ ಮಾಡಿ ಕೊಡಲಾಗಿದೆ ಎಂದು ನರಿಕೊಂಬು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉಮೇಶ ಬೋಳಂತೂರು ಪ್ರತಿಕ್ರಿಯಿಸಿದ್ದಾರೆ.
ಇದೀಗ ಮತ್ತೆ ಚುನಾವಣಾ ನೀತಿ ಸಂಹಿತೆ ನೆಪದಲ್ಲಿ ಜನಪ್ರತಿನಿಧಿಗಳು ಕೈಕಟ್ಟಿ ಕುಳಿತಿದ್ದು, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಕ್ಷಣವೇ ಮಧ್ಯೆ ಪ್ರವೇಶಿಸಿ ಈ ರಸ್ತೆ ದುರಸ್ತಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *