ಧಾರ್ಮಿಕ ಮಸೂದೆಯನ್ನು ತರುವ ಯೋಚನೆ ಮಾಡುತ್ತಿರುವ ಸರ್ಕಾರದಿಂದ ಮುಂದಕ್ಕೆ ಹಿಂದುಗಳು ಸತ್ಯನಾರಾಯಣ ಪೂಜೆಗೂ ಅನುಮತಿಯನ್ನು ಪಡೆಯಬೇಕಾದಂತಹ ದುಸ್ಥಿತಿ ಬಂದೀತು ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಎಚ್ಚರಿಸಿದ್ದಾರೆ.
ಅವರು ಕಲ್ಲಡ್ಕ ಶ್ರೀರಾಮ ಮಂದಿರದ 42ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಂದರ್ಭ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಹಿಂದುಗಳ ಶಕ್ತಿಯನ್ನು ಕಾನೂನು ಮೂಲಕ ತಡೆಯುವ ದುಸ್ಸಾಹಸ ಸರ್ಕಾರ ಮಾಡುತ್ತಿದೆ. ಹಿಂದೂಗಳ ಭಾವನೆಗೆ ಅಡ್ಡಿ ಮಾಡುತ್ತಿದೆ. ಹಿಂದೂಗಳು ಶಕ್ತಿಯುತವಾಗಿ ಸಂಘಟಿತರಾದಾಗ ಮಾತ್ರ ನಮ್ಮ ಧಾರ್ಮಿಕ ನಂಬಿಕೆ, ಆಚರಣೆಗಳನ್ನು ಉಳಿಸಲು ಸಾಧ್ಯವಾದೀತು ಎಂದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ನಮ್ಮ ಸ್ವಾಭಿಮಾನದ ಸಂಕೇತವಾಗಿದೆ. ಅದು ನಮ್ಮೆಲ್ಲರ ಸ್ವಾಭಿಮಾನದ ಸಂಕೇತವಾಗಿ ಶೀಘ್ರದಲ್ಲಿ ನಿರ್ಮಾಣವಾಗಲಿ ಎಂದರು.
ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಟಾಪನೆಗೊಳ್ಳಲಿರುವ ಹನುಮಂತನ ಬೃಹತ್ ವಿಗ್ರಹ ನಿರ್ಮಾಣಕ್ಕೆ ಸಹಾಯಾರ್ಥವಾಗಿ ಕೂಪನ್ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆ ಮಾಡಿದರು. ಸಾಮೂಹಿಕ ಸತ್ಯನಾರಾಯಣ ಪೂಜೆ ಕಶೆಕೋಡಿ ಸೂರ್ಯನಾರಾಯಣ ಭಟ್ ಪೌರೋಹಿತ್ಯದಲ್ಲಿ ಜರಗಿತು. 1500ಕ್ಕೂ ಹೆಚ್ಚು ಮಂದಿ ಪೂಜಾ ಸೇವೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಮಂದಿರದ ಗೌರವಾಧ್ಯಕ್ಷ ಡಾ|| ಪ್ರಭಾಕರ ಭಟ್ ಪ್ರಾಸ್ತಾವಿಕ ಮಾತನಾಡಿ ಕಲ್ಲಡ್ಕದಲ್ಲಿ ಶ್ರೀರಾಮ ಮಂದಿರವು ಜನತೆಯ ಸ್ಫೂರ್ತಿಯ, ಪ್ರೇರಣೆಯ ಕೇಂದ್ರವಾಗಿದೆ. ಮಂದಿರದ ಕಾರ್ಯ ಪ್ರಗತಿಯಲ್ಲಿದ್ದು 39 ಅಡಿ ಎತ್ತರದ ಶಿಲಾಮಯ ಮಂದಿರ ಮುಂದಿನ ರಾಮನವಮಿಗೆ ಉದ್ಘಾಟನೆಗೊಳ್ಳಲಿದೆ. ಈಗಾಗಲೇ 8 ಕೋಟಿಯಷ್ಟು ಖರ್ಚಾಗಿದ್ದು ಇನ್ನೂ 2 ಕೋಟಿಯಷ್ಟು ಆರ್ಥಿಕ ನೆರವು ಅಗತ್ಯವಿದ್ದು ಈ ಸತ್ಕಾರ್ಯದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕಾಗಿ ಕರೆ ನೀಡಿದರು.
ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ರುಕ್ಮಯ ಪೂಜಾರಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು. ಮಂದಿರದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ಕ.ಕೃಷ್ಣಪ್ಪ ವಂದಿಸಿದರು.

