ಬಂಟ್ವಾಳ:ತಾಲೂಕಿನ ವಗ್ಗ ಸಮೀಪದ ಆಲಂಪುರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ದೀಶಕ್ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ನೇತೃತ್ವದಲ್ಲಿ ಭಾನುವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಕೆಳಗಿನ ವಗ್ಗ ನಿವಾಸಿ ದಿವಂಗತ ದೇವಣ್ಣ ನಾಯಕ್ ಎಂಬವರ ಪುತ್ರ ದೀಶಕ್(15) ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಈತನು ಶುಕ್ರವಾರ ಬೆಳಿಗ್ಗೆ ಸಮವಸ್ತ್ರ ಧರಿಸಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಈ ವಿದ್ಯಾರ್ಥಿ ನಿಲಯದಲ್ಲಿ ವಾರ್ಡನ್ ಮತ್ತು ಭದ್ರತಾ ಸಿಬ್ಬಂದಿ ಕೂಡಾ ಇಲ್ಲದೆ ಪ್ರಾಂಶುಪಾಲರೊಬ್ಬರೇ ಎಲ್ಲವನ್ನೂ ನಿಭಾಯಿಸುವಂತಾಗಿದೆ. ಇದಕ್ಕಾಗಿ ಮುಂದಿನ ಒಂದು ವಾರದೊಳಗೆ ವಿದ್ಯಾರ್ಥಿ ಆತ್ಮಹತ್ಯೆ ಬಗ್ಗೆ ಸಮಗ್ರ ತನಿಖೆ ನಡೆಸಿ ಮೃತರ ಪೋಷಕರು ಮತ್ತು ಸಾರ್ವಜನಿಕರಿಗೆ ಸತ್ಯಾಂಶ ತಿಳಿಸಬೇಕು. ಈ ತನಿಖೆ ಪೂರ್ಣಗೊಳ್ಳುವ ತನಕ ಇಲ್ಲಿನ ಪ್ರಾಂಶುಪಾಲರನ್ನು ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕಾವಳಪಡೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಾಣಿಕ್ಯರಾಜ್ ಜೈನ್, ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಶಿವಪ್ಪ ಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ ಬಂಗೇರ ಆಲಂಪುರಿ, ದಾಮೋದರ, ಸವಿತಾ, ಲೋಲಾಕ್ಷಿ, ತ್ರಿಶಲ, ಪ್ರಮುಖರಾದ ಪ್ರಭಾಕರ, ಯಶವಂತ, ಗೋಪಾಲ, ರೋಹಿನಾಥ್, ರಮೇಶ ಕುಲಾಲ್, ಸಂತೋಷ್, ಜಯಂತ ಮತ್ತಿತರರು ಇದ್ದರು.
