ಬಂಟ್ವಾಳ; ರಾಜ್ಯದ ಸುಮಾರು ಆರು ಸಾವಿರ ಗ್ರಾಮಪಂಚಾಯತ್ ಗಳು ಮೂರುವರೆ ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿಯಿದ್ದು, ಈ ಪೈಕಿ ಒಂದೂವರೆ ಸಾವಿರ ಕೋಟಿ ಬಡ್ಡಿ ಮೊತ್ತವೂ ಸೇರಿದೆ, ಗ್ರಾ.ಪಂ. ಗಳಿಗೆ ನೀಡುವ ಅನುದಾನವನ್ನು ಈ ಬಾಕಿ ವಿದ್ಯುತ್ ಬಿಲ್ ಗೆ ಕಡಿತವಾಗುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಈ ನಿಟ್ಟಿನಲ್ಲಿ ಬಡ್ಡಿಮನ್ನಾ ಮಾಡಬೇಕೆಂದು ಮುಂದಿನ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದು ವಿಧಾನ ಪರಿಷತ್ ನ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಶನಿವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ನ ಸಾಮಾನ್ಯ ಸಭೆಯಲ್ಲಿ ವಿಧಾನ ಪರಿಷತ್ ಗೆ ಚುನಾಯಿತರಾದ ಬಳಿಕ ಮೊದಲ ಬಾರಿಗೆ ಆಗಮಿಸಿದ ಅವರು, ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷರೊಬ್ಬರ ಪ್ರಶ್ನೆಗೆ ಅವರು ಈ ಭರವಸೆ ನೀಡಿದರು. ಪಂಚಾಯತ್ ರಾಜ್ನ ತ್ರಿ ಟಯರ್ ಆಡಳಿತ ವ್ಯವಸ್ಥೆಯಲ್ಲಿ ತಾಲೂಕು ಪಂಚಾಯತ್ ಅತೀ ಸೂಕ್ಷ್ಮವಾಗಿದ್ದು, ಇದನ್ನು ಶಕ್ತಿಯುತವಾಗಿ ಬೆಳೆಸಲು ರಮೇಶ್ ಕುಮಾರ್ ವರದಿಯ ಪರಿಣಾಮಕಾರಿ ಅನುಷ್ಠಾನ ಆಗಬೇಕಿದೆ ಎಂದರು. ತಾಲೂಕು ಪಂಚಾಯತ್ ನ ಕೊನೆಯ ಅವಧಿಯಲ್ಲಿರುವ ಸದಸ್ಯರುಗಳಿಗೆ ತಮ್ಮ ಐದು ವರ್ಷದ ಅವಧಿಯಲ್ಲಿ ಮಾಡಿರುವ ಸಾಧನೆಯ ಬಗ್ಗೆ ಕೆಲವರು ತೃಪ್ತಿ ಪಟ್ಟಿರಬಹುದು, ಇನ್ನೂ ಕೆಲವರಿಗೆ ಅನುದಾನ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ಪರಿಪೂರ್ಣವಾಗಿ ಸಾಧ್ಯವಾಗದಿರಬಹುದು. ಹಾಗೆಯೇ ಸದಸ್ಯರ ಪೈಕಿ ಕೆಲವರು ಮತ್ತೆ ಚುನಾವಣೆ ಎಂಬ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದು ಬಂದು ತಮ್ಮ ಕೆಲಸವನ್ನು ಪೂರ್ಣಗೊಳಿಸುವ ಅವಕಾಶ ಒದಗಿಬರುವ ಸಾಧ್ಯೆತೆಯೂ ಇದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ತನ್ನ ಶುಭಾಶಯವನ್ನು ಕೋರಿದರು. ಜನಪ್ರತಿನಿಧಿಗಳಾಗುವುದು ಒಂದು ಯೋಗ ಎಂದ ಅವರು, ಅಧಿಕಾರಿಗಳನ್ನೂ ಗೌಋವಿಸುವ ಮೂಲಕ ತಮ್ಮ ಕೆಲಸ ಕಾರ್ಯಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಪೂರ್ಣಗೊಳಿಸಬೇಕು ಎಂದು ಸದಸ್ಯರಿಗೆ ಸಲಹೆ ನೀಡಿದರು.
ಇದೇ ವೇಳೆ ಪುನರಾಯ್ಕೆಗೊಂಡ ಕೋಟ ಶ್ರೀನಿವಾಸ ಪೂಜಾರಿಯವರನ್ನು ್ನ ಬಂಟ್ವಾಳ ತಾಲೂಕು ಪಂಚಾಯತ್ ವತಿಯಿಂದ ಅಧ್ಯಕ್ಷ ಯಶವಂತ ಡಿ.ಯವರು ಸನ್ಮಾನಿಸಿದರು. ಉಪಾಧ್ಯಕ್ಷೆ ವಿಲಾಸಿನಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ ವೇದಿಕೆಯಲ್ಲಿದ್ದರು. ಕೊನೆಯ ಸಭೆಯನ್ನು ನುಂಗಿ ಹಾಕಿದ 94ಸಿ.. ತಾಲೂಕು ಪಂಚಾಯತ್ ನ ಐದು ವರ್ಷದ ಆಡಳಿತದ ಕೊನೆಯ ಸಾಮಾನ್ಯ ಸಭೆಯಲ್ಲಿ 94ಸಿ ಮತ್ತು 94ಸಿಸಿ ಯೋಜನೆಯಡಿ ಹಕ್ಕು ಪತ್ರ ಮಂಜೂರು ಗೊಳಿಸುವ ಕುರಿತಂತೆ ಸುದೀರ್ಘ ಚರ್ಚೆ ನಡೆಯಿತು. ವಸ್ತುಶಃ ಈ ಚರ್ಚೆ ಸಭೆಯನ್ನೇ ನುಂಗಿ ಹಾಕಿತು. ಉಪತಹಶೀಲ್ದಾರ್ ಪರಮೇಶ್ವರ ಮೊೈಲಿಯವರು ನೀಡಿದ ಉತ್ತರದಿಂದ ಸದಸ್ಯರು ಅಸಮಾಧಾನಗೊಂಡು, ರಾಜ್ಯದಲ್ಲಿಯೇ ಬಂಟ್ವಾಳ ತಾಲೂಕಿನಲ್ಲಿ ಅತೀಹೆಚ್ಚು ಫಲಾನುಭವಿಗಳಿಗೆ 94 ಸಿ ಯಡಿಯಲ್ಲಿ ಹಕು ಪತ್ರ ನೀಡಿದ ಹೆಗ್ಗಳಿಕೆ ಇದೆ, ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಸದಸ್ಯರಾದ ಮಾಧವ ಮಾವೆ ಹಾಗೂ ಪದ್ಮಶೇಖರ್ ಜೈನ್ ಅವರು ಸೂಚಿಸಿದರೆ, ಸದಸ್ಯ ಶರೀಫ್ ಅವರು, ಕೇವಲ ಬ್ರೋಕರ್ ಗಳಿದ್ದಲ್ಲಿ ಮಾತ್ರ ಅತೀಹೆಚ್ಚು ಹಕ್ಕು ಪತ್ರ ನೀಡಲಾಗಿದೆ ಎಂದು ವ್ಯಂಗ್ಯವಾಡಿದಾಗ, ಸದಸ್ಯ ದಿನೇಶ್ ಅಮ್ಟೂರು ಇದಕ್ಕೆ ಧ್ವನಿಗೂಡಿಸಿದರು. ಇದೇ ವೇಳೆ ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ತಾ.ಪಂ.ಸದಸ್ಯ ಸಂಪತ್ ಕುಮಾರ್, ಉಷಾ , ಆನಂದ ಶಂಭೂರು, ಶೈಲಜಾ ಶೆಟ್ಟಿ, ಮೊದಲಾದವರು 94 ಸಿ ಹಾಗೂ ಸಿ.ಸಿ. ಯಲ್ಲಿಸಾರ್ವಜನಿಕರಲ್ಲಿನ ಗೊಂದಲಗಳ ಬಗ್ಗೆ ಪ್ರಸ್ತಾಪಿಸಿದರು. ಈ ಬಗ್ಗೆ ತಹಶೀಲ್ದಾರರ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಬಗ್ಗೆ ಅಧ್ಯಕ್ಷ ಯಶವಂತ ಅವರು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು. ವಿಶೇಷ ಘಟಕ ಯೋಜನೆ ಯಲ್ಲಿನ ಫಲಾನುಭವಿಗಳ ಆಯ್ಕೆಯಲ್ಲಿ ಗೊಂದಲ ಉಂಟಾಗಿದೆ ಎಂದು ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡ ಘಟನೆಗೂ ಶನಿವಾರ ಸಭೆ ಸಾಕ್ಷಿಯಾಯಿತು. ಸದಸ್ಯ ಸಂಪತ್ ಕುಮಾರ್ ಶೆಟ್ಟಿ ವಿಷಯ ಪ್ರಸ್ತಾಪಿಸಿ, ಫಲಾನುಭವಿಗಳ ಆಯ್ಕೆಯಲ್ಲಿ ಎಲ್ಲಾ ಗ್ರಾಮಗಳಿಗೆ ಪ್ರಾತಿನಿದ್ಯ ದೊರೆತಿಲ್ಲ ಎಂದಾಗ , ಈ ವಿಚಾರ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ನನ್ನ ಗಮನಕ್ಕೆ ಬಂದಿಲ್ಲ ಎಂದು ಉತ್ತರಿಸಿದರು. ಇದರಿಂದ ಅಸಮಾಧಾನಗೊಂಡ ಅವರು, ಹಾಗಿದ್ದರೆ ನೀವು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದರಿಂದ ಅತೃಪ್ತರಾದ ಸ್ಥಾಯಿ ಸಮಿತಿ ಅಧ್ಯಕ್ಷೆ ಐಡಾ ಅವರು ವೇದಿಕೆಯಿಂದ ಕೆಳಗಿಳಿಯಲು ಮುಂದಾದರು. ಆಗ ಪಕ್ಕದಲ್ಲಿ ಕುಳಿತ್ತಿದ್ದ ಉಪಾಧ್ಯಕ್ಷೆ ವಿಲಾಸಿನಿ ಯವರು, ತಕ್ಷಣ ಐಡಾ ಅವರ ಕೈ ಹಿಡಿದೆಳೆದು ಸ್ಥಸ್ಥಾನದಲ್ಲಿ ಕೂರಿಸಿದರು. ಕೊನೆಗೆ ಅಧಿಕಾರಿಯವರ ಎಡವಟ್ಟಿನಿಂದ ಗೊಂದಲ ಉಂಟಾಗಿದ್ದು, ಪಟ್ಟಿಯನ್ನು ಪುನರ್ ಪರಿಶೀಲನೆ ನಡೆಸುವುದೆಂದು ನಿರ್ಧರಿಸಲಾಯಿತು. ಬಂಟ್ವಾಳದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಡಿಸೆಂಬರ್ ನಲ್ಲಿ ಪೂರ್ಣಗೊಳ್ಳುವ ಭರವಸೆ ನೀಡಲಾಗಿತ್ತು. ಗುತ್ತಿಗೆದಾರರು ಕೂಡ ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಜನವರಿಯಲ್ಲಿ ಮೊದಲ ಅಂತಸ್ತಿನ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ವೈದ್ಯಾಧಿಕಾರಿ ಡಾ.ರಾಧಿಕಾ ಸಭೆಗೆ ಮಾಹಿತಿ ನೀಡಿದರು.

