ಬಂಟ್ವಾಳ: ಕಳೆದ ನೂರು ದಿನಗಳ ಹಿಂದೆ ತುಳುನಾಡ ಕೃಷಿ ಕ್ರಾಂತಿಯ ಮೂಲಕ ಸಜೀಪಮೂಡ ಗ್ರಾಮದ ಮಿತ್ತಮಜಲು ಬಳಿಯ ಕುಡಮುಂದೂರಿನ ವಿಶಾಲವಾದ ಕಂಬಳಗದ್ದೆಯಲ್ಲಿ ನಡೆಸಿದ ಸಾವಯವ ಭತ್ತದ ಬೇಸಾಯ ಸಮೃದ್ದ ಫಸಲು ನೀಡಿದೆ. ಶನಿವಾರ ಕ್ಷೇತ್ರೋತ್ಸವ ಕಾರ್ಯಕ್ರಮದ ಮೂಲಕ ಯಾಂತ್ರೀಕೃತ ಕೊಯ್ಲು ನಡೆಸಲಾಯಿತು.
ಸುಮಾರು 7 ವರ್ಷಗಳಿಂದ ಬೆಳೆಯಿಲ್ಲದ್ದೆ ಹಡಿಲು ಬಿದ್ದಿದ್ದ ಕುಶಲಶೆಟ್ಟಿಯವರ 4 ಎಕರೆ ವಿಸ್ತೀರ್ಣದ ಕಂಬಳಗದ್ದೆಯನ್ನು ಕೃಷಿಕ್ರಾಂತಿಯ ರುವಾರಿ ಉಳಿಪಾಡೀಗುತ್ತು ರಾಜೇಶ್‍ನಾೈಕ್ ಅವರ ಮಾರ್ಗದರ್ಶನದಲ್ಲಿ, ಸಜೀಪಮೂಡ ಗ್ರಾಮಪಂಚಾಯಿತಿ ಸದಸ್ಯ ಸೀತಾರಾಮ ಅಗೋಳಿಬೆಟ್ಟು ಅವರ ನೇತೃತ್ವದಲ್ಲಿ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ ಹಾಗೂ ಸ್ಥಳೀಯ ಯುವಕರ ತಂಡದ ನೆರವಿನೊಂದಿಗೆ ಕಳೆದ ನೂರು ದಿನಗಳ ಹಿಂದೆ ಕೆಸರ್ಡ್ ಒಂಜಿ ದಿನ, ತುಳುನಾಡ ಕೃಷಿ ಕ್ರಾಂತಿ ಎನ್ನುವ ಕಾರ್ಯಕ್ರಮದ ಮೂಲಕ ಗದ್ದೆಯನ್ನು ಉಳುಮೆ ನಡೆಸಿ ನಾಟಿ ಮಾಡಲಾಗಿತ್ತು. ಇದೀಗ ಮೂರುವರೆ ತಿಂಗಳ ಬಳಿಕ ಬರಡಾಗಿದ್ದ ಗದ್ದೆಯಲ್ಲಿ ಬಂಗಾರದ ಬೆಳೆ ಬಂದಿರುವುದು ಕೃಷಿ ಕ್ರಾಂತಿ ನಡೆಸಿದ ಯುವಕರಲ್ಲಿ ಸಂಭ್ರಮ ಮೂಡಿಸಿದೆ.
ಪ್ರಗತಿಪರ ಕೃಷಿಕ ರಾಜೇಶ್‍ನಾೈಕ್ ಅವರು ಭತ್ತದ ಪೈರಿನ ಕಟಾವಿಗೆ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಜೀಪಮೂಡದ ಯುವಕರ ಪರಿಶ್ರಮದಿಂದ ಹಡಿಲು ಬಿದ್ದ ಗದ್ದೆ ಮತ್ತೆ ಕೃಷಿಯತ್ತ ಮುಖಮಾಡಿದೆ. ಪರಿಶ್ರಮಕ್ಕೆ ತಕ್ಕಂತೆ ಉತ್ತಮ ಬೆಳೆ ಬಂದಿದೆ. ಇದೇ ರೀತಿ ಈ ಗ್ರಾಮದ ಎಲ್ಲಾ ಹಡೀಲು ಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ನಡೆಯಲಿ ಎಂದು ಆಶಿಸಿದರು.
ಕೃಷಿ ಕ್ರಾಂತಿಯ ನೇತೃತ್ವ ವಹಿಸಿದ್ದ ಸೀತಾರಾಮ ಅಗೊಳಿಬೆಟ್ಟು, ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಮನೋಹರ ಶೆಟ್ಟಿ, ಶರತ್, ಜಿ.ಪಂ.ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರಾ, ಜಮೀನಿನ ಮಾಲಕಿ ಕುಶಲಶೆಟ್ಟಿ, ಪ್ರಮುಖರಾದ ವಸಂತಶೆಟ್ಟಿ ಕೊಯಮಜಲು, ಸುರೇಶ್ ಶೆಟ್ಟಿ, ದಕ್ಷನ್, ಕುಶಲಾಕ್ಷ ಮತ್ತಿತರರು ಹಾಜರಿದ್ದರು.
