ಬಂಟ್ವಾಳ: ಕಸ ವರ್ಗಾಯಿಸಲು ರ್ಯಾಂಪ್ ಮಾತ್ರ ಮಾಡುತ್ತೇವೆ, ಯಾವುದೇ ಕಾರಣಕ್ಕೂ ಇಲ್ಲಿ ಕಸ ಹಾಕಲು ಬಿಡುವುದಿಲ್ಲ ಎಂದು ಭರವಸೆ ನೀಡಿ ಬಂಟ್ವಾಳ ಪುರಸಭೆ ನಿರ್ಮಿಸಿದ ರ್ಯಾಂಪ್ ಇದೀಗ ಪರ್ಯಾಯ ಡಂಪಿಂಗ್‍ಯಾರ್ಡ್ ಆಗಿದೆ. ರ್ಯಾಂಪಲ್ಲಿ ನಿಲ್ಲಿಸಿದ ಲಾರಿಯಲ್ಲಿ ಕಸ ತುಂಬಿ ತುಳುಕಿ ದುರ್ವಾಸನೆ ಬೀರುವುದರೊಂದಿಗೆ ಸಾರ್ವಜನಿಕರು ಎಸೆದ ಕಸ ಲಾರಿ ಸೇರದೆ ರಸ್ತೆ ಬದಿಯಲ್ಲಿಯೇ ರಾಶಿ ಬಿದ್ದಿದೆ.
11

9

10ನಿರ್ಮಲ ಬಂಟ್ವಾಳ ಯೋಜನೆಯಡಿ ಸ್ವಚ್ಛ ಬಂಟ್ವಾಳದ ಕನಸು ಕಾಣುತ್ತಿರುವ ಬಂಟ್ವಾಳ ಪುರಸಭೆಯ ಅಸಲಿತನ ಇದು. ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದ ಬಳಿ, ಜನ ನಡೆದಾಡುವ ಪ್ರದೇಶದಲ್ಲೇ ರ್ಯಾಂಪ್ ಅರ್ಥಾತ್ ತ್ಯಾಜ್ಯ ಘಟಕ ನಿರ್ಮಿಸಿ ಜನರ ಟೀಕೆಗೆ ಗುರಿಯಾಗಿದೆ.
ಶುಲ್ಕ ವಸೂಲಿ ಮಾಡಿ ಮನೆ ಮನೆಗಳಿಂದ ಟ್ರಾಕ್ಟರ್ ಮೂಲಕ ಸಂಗ್ರಹಿಸಿ ತಂದ ಕಸವನ್ನು ಈ ರ್ಯಾಂಪ್ ಮೂಲಕ ಲಾರಿಗೆ ವರ್ಗಾಯಿಸಲಾಗುತ್ತದೆ. ಆದರೆ ಲಾರಿಗೆ ತುಂಬಿದ ಕಸ ಪ್ರತಿದಿನ ವಿಲೇವಾರಿಯಾಗದ ಕಾರಣ ಕೊಳೆತು ದುರ್ನಾತ ಬೀರುತ್ತಿದೆ. ವಾಹಗಳಲ್ಲಿ ಬರುವ ಮಂದಿ ಕೊಳೆತ ತ್ಯಾಜ್ಯಗಳನ್ನು ತಂದು ಇಲ್ಲೇ ಎಸೆಯುತ್ತಾರೆ. ಅದು ಲಾರಿಯಲ್ಲಿ ಸಂಗ್ರಹವಾಗುವ ಬದಲು ರಸ್ತೆ ಬದಿಯಲ್ಲಿ ರಾಶಿ ಬೀಳುತ್ತಿದೆ. ಈ ಪರಿಸರದಲ್ಲಿ ಕಾಲೇಜು, ಸೇವಾಮಂದಿರ, ರೈಲು ನಿಲ್ದಾಣ, ಮನೆಗಳಿದ್ದು ಜನರು ನಡೆದಾಡುವ ಪರಿಸರದಲ್ಲಿ ಕಸ ಎಸೆಯಲು ಪುರಸಭೆಯೇ ಅವಕಾಶ ಮಾಡಿಕೊಟ್ಟಂತಾಗಿದೆ. ಬಂಟ್ವಾಳ ಪೇಟೆ ಹಾಗೂ ಬೈಪಾಸ್‍ಗೆ ತೆರಳುವ ರಸ್ತೆ ಸಂದಿಯಲ್ಲಿದ್ದ ಕಸದ ರಾಶಿಗೆ ಮುಕ್ತಿ ನೀಡಿ ಹೊಸ ಅನಧೀಕೃತ ಡಂಪಿಂಗ್‍ಯಾರ್ಡನ್ನು ಪುರಸಭೆಯೇ ನಿರ್ಮಿಸಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ಸ್ಥಳದಲ್ಲಿ ಪಿಕಪ್ ವಾಹನಗಳ ಪಾರ್ಕಿಂಗ್ ಇದ್ದು ಬಾಡಿಗೆ ಕಾಯುವ ಚಾಲಕರು ನಿತ್ಯ ಮೂಗುಮುಚ್ಚಿಕೊಂಡೆ ಇರುವಂತಾಗಿದೆ.
ನಿಷ್ಪ್ರಯೋಜಕ ಸ್ವಚ್ಛತಾ ಕಾರ್ಯಕ್ರಮ:
ಸ್ವಚ್ಚ ಭಾರತ್ ಮಿಷನ್‍ನಡಿ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಪ್ರತೀ ಗುರುವಾರ ಪುರಸಭಾ ಸಿಬ್ಬಂದಿಗಳು ಹಾಗೂ ಕೆಲ ಸದಸ್ಯರು ಸ್ವಚ್ಛತಾ ಕಾರ್ಯಕ್ರಮ ನಡೆಸುತ್ತಾರೆ. ಕಳೆದ ವಾರ ಬಿ.ಸಿ.ರೋಡಿನ ನ್ಯಾಯಲಯದ, ಪೊಲೀಸ್ ಠಾಣೆ ಹಾಗೂ ಸರ್ಕಾರಿ ಕಚೇರಿಗಳ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ಈ ಪ್ರದೇಶವನ್ನು ಪ್ರತೀ ದಿನ ಪೌರಕಾರ್ಮಿಕರು ಗುಡಿಸಿ ಸ್ವಚ್ಛಗೊಳಿಸುತ್ತಾರೆ. ಮೊದಲೇ ಸ್ವಚ್ಛತೆಯಿರುವ ಪ್ರದೇಶದಲ್ಲಿ ಕೇವಲ ಪ್ರಚಾರಕ್ಕಾಗಿ ಸ್ವಚ್ಛತೆ ಮಾಡುವ ಬದಲು ಕೈಕಂಬ ರಾಷ್ಟ್ರೀಯ ಹೆದ್ದಾರಿ ಬಳಿ, ಮೆಲ್ಕಾರ್ ಜಂಕ್ಷನ್, ಪಾಣೆಮಂಗಳೂರು ಶಾರದ ಪೌಢಶಾಲೆ ಮತ್ತಿತರ ಸ್ಥಳಗಳಲ್ಲಿರುವ ತ್ಯಾಜ್ಯಗಳನ್ನು ಸ್ವಚ್ಚ ಮಾಡಿ ನೈಜ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಿ, ಸಾರ್ವಜನಿಕ ಸ್ಥಳದಲ್ಲಿ ರ್ಯಾಂಪ್ ನಿರ್ಮಿಸಿ ಜನರಿಗೆ ಆರೋಗ್ಯ ಭೀತಿ ನೀಡುವ ಬದಲು ಸ್ಥಗಿತಗೊಂಡಿರುವ ತ್ಯಾಜ್ಯ ಸಂಸ್ಕರಣ ಘಟಕದ ಕಾಮಗಾರಿಯನ್ನು ಪುನಾರಂಭಿಸಿ ನಿರ್ಮಲ ಬಂಟ್ವಾಳ ಯೋಜನೆ ವಾಸ್ತವದಲ್ಲಿ ಕಾರ್ಯರೂಪಕ್ಕೆ ಬರಲಿ ಎನ್ನುವ ಸಲಹೆಗಳು ಪ್ರಜ್ಞಾವಂತ ನಾಗರೀಕರಿಂದ ಕೇಳಿ ಬಂದಿದೆ.

By suddi9

Leave a Reply

Your email address will not be published. Required fields are marked *