ಸುರತ್ಕಲ್,ಮೇ.12-ಇಲ್ಲಿನ ಸುರತ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ66ರಲ್ಲಿನ ಪಡ್ರೆ ಧೂಮಾವತಿ ದೈವಸ್ಥಾನದ ದ್ವಾರದ ಮುಂಭಾಗದಲ್ಲಿ ಇಂದು ಭೀಕರ ಅಪಘಾತ ಸಂಭವಿಸಿದ್ದು, ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ. ಅಪಘಾತದಲ್ಲಿ ರಿಕ್ಷಾವು ಲಾರಿಯಡಿಗೆ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ವಾಮಂಜೂರು ಉಳಾಯಿಬೆಟ್ಟು ನಿವಾಸಿ ರಿಕ್ಷಾ ಚಾಲಕ ಸುನಿಲ್ ಹಾಗೂ ಪ್ರಯಾಣಿಸುತ್ತಿದ್ದ ನಿಶ್ಮಿತಾ, ಆಶ್ರಿತಾ ಎಂದು ಗುರುತಿಸಲಾಗಿದ್ದು ಕವಿತಾ ಎಂಬುವವರು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತಪಟ್ಟ ರಿಕ್ಷಾ ಚಾಲಕ ಸುನಿಲ್ ತನ್ನ ಸಹೋದರಿ ಕವಿತಾ ಹಾಗೂ ಇತರ ಸಂಬಂದಿಕರೊಂದಿಗೆ ವಾಮಂಜೂರಿನಿಂದ ಪಡ್ರೆಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಮುಕ್ಕ ಪೆಟ್ರೋಲ್ ಪಂಪ್ ಬಳಿ ಪೆಟ್ರೋಲ್ ತುಂಬಿಸಿ ಹೊರಗೆ ಬರುತ್ತಿದ್ದ ವೇಳೆ ರಿಕ್ಷಾಗೆ ಲಾರಿ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಡಿಕ್ಕಿ ರಭಸಕ್ಕೆ ಕವಿತಾ ಹೊರಕ್ಕೆಸೆಯಲ್ಪಟ್ಟಿದ್ದು, ಮಕ್ಕಳಾದ ನಿಶ್ಮಿತಾ ಹಾಗೂ ಆಶ್ರಿತಾ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ಸ್ಥಳೀಯರು ಹರಸಾಹಸ ಪಟ್ಟು ಮೃತದೇಹವನ್ನು ಹೊರತೆಗೆದಿದ್ದು, ಲಾರಿಯಡಿಯಲ್ಲಿ ಸಿಲುಕಿದ್ದ ರಿಕ್ಷಾವನ್ನು ಕ್ರೇನ್ ಮೂಲಕ ಹೊರತೆಗೆಯಲಾಗಿದೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
