ಮೂಡುಬಿದಿರೆ: ಹಿರಿಯ ಕಲಾವಿದ ದೆಹಲಿಯ ಪದ್ಮಶ್ರೀ ಡಾ. ಮನು ಪರೇಖ್ ಅವರಿಗೆ ವರ್ಣ ವಿರಾಸತ್ ಪ್ರಶಸ್ತಿಯನ್ನು ವಿರಾಸತ್ ಕೊನೆಯ ದಿನವಾದ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಪ್ರದಾನ ಮಾಡಲಾಯಿತು.

ಪದ್ಮಶ್ರೀ ಪುರಸ್ಕೃತರಾದ ಹಿರಿಯ ಕಲಾವಿದ ಡಾ. ಮನು ಪರೇಖ್ ಅವರಿಗೆ ಶಾಲು ಹೊದೆಸಿ, ಆಳ್ವಾಸ್ ಸ್ಮರಣಿಕ ನೀಡಿ 25 ಸಾವಿರ ನಗದು ನೀಡಿ ಗೌರವಿಸಲಾಯಿತು. ಮನುಪರೇಖ್ ಅವರ ಪತ್ನಿ ಮಾಧವಿ ಪರೇಖ್, ಆಳ್ವಾಸ್ ವಿರಾಸತ್ ರೂವಾರಿ ಡಾ.ಎಂ ಮೋಹನ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ, ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ, ನಿಟ್ಟೆ ವಿವಿಯ ಉಪ ಕುಲಪತಿ ಡಾ. ಎಸ್. ರಮಾನಂದ ಶೆಟ್ಟಿ, ಮುಡಿಪು ಸೂರಜ್ ಎಜುಕೇಶನ್ ,ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್ ,ಮುನಿಯಾಲು ಆಯುರ್ವೇದ ಕಾಲೇಜಿನ ಆಡಳಿತ ನಿರ್ದೇಶಕ ವಿಜಯ ಭಾನು ಶೆಟ್ಟಿ ಮತ್ತು ಸಲಹಾ ಸಮಿತಿಯ ಸದಸ್ಯರಾದ ಗಣೇಶ್ ಸೋಮಯಾಜಿ ಮತ್ತು ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.
ಬಂಟ್ಸ್ ಎಸೋಸಿಯೇಶನ್ ಮುಂಬೈ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಕರ್ನೆರೆ, ಮೂಡುಬಿದಿರೆಯ ಉದ್ಯಮಿ ದೇವಿ ಪ್ರಸಾದ್ ಶೆಟ್ಟಿ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿದರು. ಪ್ರಶಸ್ತಿ ಪುರಸ್ಕೃತರನ್ನು ಗಣ್ಯರೊಂದಿಗೆ ರಾಜಸ್ತಾನಿ ಕಲಾಮೇಳದಲ್ಲಿ ಸ್ವಾಗತಿಸಲಾಯಿತು.
