ಮೂಡುಬಿದರೆ: ಮೊದಲು ನಾವು ತುಳುವರೆಂಬುದು ನಮ್ಮ ಭಾವನೆಯಾಗಬೇಕು. ಮಾನವ ಒಳ್ಳೆಯವನಾಗುವುದೇ ನಿಜವಾದ ಸೌಹಾರ್ದತೆ, ಸಾಮರಸ್ಯ. ಜಾಗತಿಕ, ದೇಶಾಭಿವೃದ್ಧಿಗೆ ಕೋಮುವಾದವೇ ಅಡ್ಡಿಯಾಗಿದೆ. ನಾವು ಅಂತರಂಗದಲ್ಲಿ ಗಟ್ಟಿಯಾಗಬೇಕು. ಇಂದು ಭೌತಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ಸುಗಂಧದ ನೈತಿಕ ಶಿಕ್ಷಣ ನೀಡುವುದು ನಮ್ಮ ಗುರಿಯಾಗಬೇಕು. ಮನಸ್ಸು ಒಡೆಯುವ ಬದಲು ಹೃದಯ ಬೆಸೆಯುವ ಕೆಲಸ ನಡೆಯಬೇಕು ಎಂದು ಕೇಮಾರು ಸಾಂದಿಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ನುಡಿದರು.


ಬಾಲಯೇಸುವಿನ ಪುಣ್ಯ ಕ್ಷೇತ್ರ-ಅಲಂಗಾರು ಚರ್ಚ್ ಹಾಗೂ ರೋಟರಿ ಕ್ಲಬ್ ಮೂಡುಬಿದರೆ ಹಾಗೂ ಲಯನ್ಸ್ ಕ್ಲಬ್ ಅಲಂಗಾರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅಲಂಗಾರು ಹೋಲಿ ರೋಸರಿ ಚರ್ಚ್ನ ಬಾಲಯೇಸು ಮಂ ಟಪದಲ್ಲಿ ನಡೆದ ಕ್ರಿಸ್ಮಸ್ ಸೌಹಾರ್ದ ಕೂಟ-2015 ಸಮಾರಂಭದಲ್ಲಿ ಆಶೀವರ್ಚನ ನೀಡಿದರು.
ಮೀನುಗಾರಿಕ ಸಚಿವ ಕೆ.ಅಭಯಚಂದ್ರ ಜೈನ್ ಸಮಾರಂಭವನ್ನು ಉದ್ಘಾಟಿಸಿದರು. ಅಲಂಗಾರು ಚರ್ಚ್ನ ಧರ್ಮಗುರು ರೆ.ಫಾ ಬೇಸಿಲ್ ವಾಸ್ ಕ್ರಿಸ್ಮಸ್ ಕೇಕ್ ಕತ್ತರಿಸಿದರು.
ಮಂಗಳೂರು ಧರ್ಮಕ್ಷೇತ್ರ ಅಂತರಧರ್ಮಿಯ ಆಯೋಗದ ಕಾರ್ಯದರ್ಶಿ ರೆ.ಫಾ.ಕ್ಲಿಫರ್ಡ್ ಫೆರ್ನಾಂಡಿಸ್ ಸಾಮರಸ್ಯ ಸಂದೇಶ ನೀಡಿ, ಬದುಕುವ ಮತ್ತು ಬದುಕಲು ಬಿಡುವುದು ಹಾಗೂ ತೊಂದರೆ ಮಾಡದಿರುವುದೇ ಸೌಹಾರ್ದ.ಪರಿಸರದಿಂದ ನಾವು ಜೀವನದ ಪಾಠ ಕಲಿಯಬೇಕು. ಎಲ್ಲರಲ್ಲಿಯೂ ದೇವರನ್ನು ಕಾಣುವವರು ಮತ್ತು ದೇವರಲ್ಲಿ ಎಲ್ಲರನ್ನೂ ಕಾಣುವವರು ಎಂದಿಗೂ ದ್ವೇಷವನ್ನು ಬೆಳೆಸಿಕೊಳ್ಳುವುದಿಲ್ಲ. ನಿಷ್ಕಾಮ ಕರ್ಮ, ದಾನ, ಮತ್ತು ಶತ್ರು ಪ್ರೇಮದ ಸದ್ಗುಣಗಳು ನಮ್ಮದಾಗಲಿ. ಮೋಸ, ದ್ವೇಷ ಬೇಕಿಲ್ಲ. ಕಣ್ಣೀರು ಭೂಮಿಗೆ ಬೀಳಬಾರದು.ಅಂತಹದುದರಲ್ಲಿ ಇನ್ನೊಬ್ಬರ ರಕ್ತ ಭೂಮಿಗೆ ಬೀಳುವುದು ಸ್ವಾಗತಾರ್ಹವಲ್ಲ ಎಂದರು.
ಎಡಪದವು ಐಡಿಯಲ್ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಮಹಮ್ಮದ್ ಬ್ಯಾರಿ, ಪಡುಮಾರ್ನಾಡು ಕ್ರಿಸ್ತಶಾಂತಿ ಚರ್ಚ್ ಧರ್ಮಗುರು ಸುಧೀರ್ ಪ್ರಕಾಶ್, ಅಲಂಗಾರು ಚರ್ಚ್ ನ ಸಹಾಯಕ ಧರ್ಮಗುರು ರೆ.ಫಾ ಕೆನೆತ್ ಕ್ರಾಸ್ತಾ, ಮೂಡುಬಿದರೆ ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ ಥೋಮಸ್, ಅಲಂಗಾರು ಲಯನ್ಸ್ ಕ್ಲಬ್ ಸಲಹೆಗಾರ ಮನೋಹರ ಕುಟಿನ್ಹಾ, ಅಲಂಗಾರಿನ ಪಂಡಿತ್ ರೆಸಾರ್ಟ್ ಮಾಲಕ ಲಾಲ್ ಗೋಯಲ್ ಉಪಸ್ಥಿತರಿದ್ದರು.
ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಲೋಬೋ ಸ್ವಾಗತಿಸಿದರು. ಆಶಾ ಲೋಬೋ ಹಾಗೂ ವಿವಿಯನ್ ರೋಡಿಗ್ರಸ್ ಕಾರ್ಯಕ್ರಮ ನಿರ್ವಹಿಸಿದರು.
