ಮುಂಬಯಿ : ತೀಯಾ ಸಮಾಜ, ಮುಂಬಯಿಯ ಪಶ್ಚಿಮ ವಲಯ ಸ್ಥಳೀಯ ಸಮಿತಿಯ ವತಿಯಿಂದ ವಾರ್ಷಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯು ಡಿ. 13 ರಂದು, ಶ್ರೀ ಸಿದ್ದಿವಿನಾಯಕ ಮಂದಿರ, ಅಸ್ಮಿತಾ ಸ್ಕೂಲ್ ಹಿಂದುಗಡೆ, ಬಾಂದ್ರೇಕರ್ ವಾಡಿ, ಜೋಗೇಶ್ವರಿ ಪೂರ್ವ ಇಲ್ಲಿ ಜರಗಿತು.

ವೈಕುಂಠ ಭಟ್ ರ ಪೌರೋಹಿತ್ಯದಲ್ಲಿ ನಡೆದ ಪೂಜಾವಿಧಿಯಲ್ಲಿ ಶೇಖರ ಸುವರ್ಣ ದಂಪತಿ ಪೂಜಾ ವೃತವನ್ನು ಕೈಗೊಂಡರು. ಬಳಿಕ ತೀಯಾ ಸಮಾಜದ ಶ್ರೀ ಭಗವತೀ ಭಜನಾ ಮಂಡಳಿಯವರಿಂದ ಭಜನೆಯು ನಡೆಯಿತು. ಅಪರಾಹ್ನ ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಲಘು ಉಪಹಾರದೊಂದಿಗೆ ಪೂಜಾ ಕಾರ್ಯಕ್ರಮವು ಸಮಾಪ್ತಿಗೊಂಡಿತು.
ಈ ಮಧ್ಯೆ ತೀಯಾ ಸಮಾಜದ ಬೋರ್ಡ್ ಆಪ್ ಟ್ರಸ್ಟ್ ನ ಕಾರ್ಯಾಧ್ಯಕ್ಷ ರೋಹಿದಾಸ ಬಂಗೇರರ ಉಪಸ್ಥಿತಿಯಲ್ಲಿ ನಡೆದ ಧಾರ್ಮಿಕ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ತೀಯಾ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ ಬೆಳ್ಚಡ ವಹಿಸಿದ್ದು ತೀಯಾ ಸಮಾಜದ ಹಿರಿಯ ಸಮಾಜ ಸೇವಕ ರಾಮಚಂದ್ರ ಕೆ. ಸುವರ್ಣ (ಆರ್. ಕೆ. ಸುವರ್ಣ) ಅವರನ್ನು ಗೌರವ ಪೂರ್ವಕ ಸನ್ಮಾನಿಸಲಾಯಿತು. ಆ ನಂತರ ಮಾತನಾಡಿದ ಚಂದ್ರಶೇಖರ ಬೆಳ್ಚಡ ಅವರು ಹಿರಿಯ ಸಮಾಜ ಸೇವಕ ಆರ್. ಕೆ. ಸುವರ್ಣರು ತೀಯಾ ಸಮಾಜದ ಬೀಷ್ಮ ನಂತೆ. ಇಂತಹ ಹಿರಿಯ ಸಮಾಜ ಸೇವಕರನ್ನು ಸನ್ಮಾನಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ತೀಯಾ ಸಮಾಜದ ಪಶ್ಚಿಮ ವಲಯವು ಸಮಾಜಿಕ ಚಿಂತನೆಯೊಂದಿಗೆ ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ನಮ್ಮ ಧಾರ್ಮಿಕ ಸಂಸ್ಕೃತಿಯನ್ನು ಉಳಿಸಿ ಕೊಂಡು ಬರುತ್ತಿರುವುದು ಪ್ರಶಂಸನೀಯ ಎಂದರು.
ನವ ವಧೂವರರನ್ನು ಸನ್ಮಾನಿಸಲಾಯಿತು. ತೀಯಾ ಬೆಳಕು ’ಪದಸಂಪದ’ ಸ್ಪರ್ಧೆಯಲ್ಲಿ ವಿಜೇತರಾದ ಪ್ರೇಮ್ ಚಂದ್ ಮಂಗಳೂರು ಇವರಿಗೆ ಬಹುಮಾನ ವಿತರಿಸಲಾಯಿತು.
ತೀಯಾ ಸಮಾಜದ ಪಶ್ಚಿಮ ವಲಯದ ಕಾರ್ಯಾಧ್ಯಕ್ಷ ಗಂಗಾಧರ ಕಲ್ಲಾಡಿ, ಪೂರ್ವ ವಲಯದ ಕಾರ್ಯಧ್ಯಕ್ಷ ಬಾಬು ಬೆಳ್ಚಡ, ಆರೋಗ್ಯ ನಿಧಿಯ ಕಾರ್ಯಾಧ್ಯಕ್ಷ ತಿಮ್ಮಪ್ಪ ಬಂಗೇರ, ಮಹಿಳಾ ವಿಭಾಗಗಳ ಕಾರ್ಯಾಧ್ಯಕ್ಷರುಗಳಾದ ದಿವ್ಯ ಆರ್. ಕೋಟ್ಯಾನ್ ಮತ್ತು ಉಜ್ವಲ ಚಂದ್ರಶೇಖರ್ , ತೀಯಾ ಬೆಳಕು ಸಂಪಾದಕ ಶ್ರೀಧರ ಸುವರ್ಣ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಸಮಿತಿಯ ಕಾರ್ಯದರ್ಶಿ ಬಿ. ಚಂದ್ರಶೇಖರ ಸಾಲ್ಯಾನ್ ಸಭಾಕಾರ್ಯಕ್ರಮವನ್ನು ನಿರೂಪಿಸಿದರು. ಗಂಗಾಧರ ಕಲ್ಲಾಡಿ ವಂದನಾರ್ಪಣೆಗೈದರು.
ತೀಯಾ ಸಮಾಜದ ಹಾಗೂ ಉಪಸಮಿತಿಗಳ ಇತರ ಪದಾಧಿಕಾರಿಗಳು, ಸದಸ್ಯರುಗಳು, ಸಮಾಜ ಬಾಂಧವರು ಹಾಗೂ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದವನ್ನು ಸ್ವೀಕರಿಸಿದರು.
ವರದಿ : ಈಶ್ವರ ಎಂ. ಐಲ್



