ಬಜ್ಪೆ: ನಾಪತ್ತೆಯಾಗಿದ್ದ ಮಹಿಳೆಯ ಶವ ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರು ಬಳಿಯ ಕೊಡಮಣಿತ್ತಾಯ ದೈವಸ್ಥಾನದ ಬಳಿಯ ಎಡಭಾಗದ ರಸ್ತೆಯ ನೀರು ಹರಿಯುವ 50 ಅಡಿ ಆಳದ ಕಂದಕದಲ್ಲಿ ಸುಟ್ಟ ರೀತಿಯಲ್ಲಿ ಪತ್ತೆಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಪತ್ತೆಯಾದ ಮೃತದೇಹವನ್ನು ಉಳ್ಳಾಲದ ವೀರನಗರ ನಿವಾಸಿ, ಅಶ್ವಿನ್ ಶೆಟ್ಟಿ ಎಂಬವರ ಪತ್ನಿ, ಪ್ರಸ್ತುತ ನಗರದ ಮಾಂಡೊವಿ ಮೋಟಾರ್ಸ್ ಉದ್ಯೋಗಿಯಾಗಿದ್ದ ಉಷಾ ಶೆಟ್ಟಿ(29) ಎಂದು ಗುರುತಿಸಲಾಗಿದೆ.

ಇವರ ತಾಯಿ ಮನೆ ಜೆಪ್ಪಿನಮೊಗರಿನ ತಾರ್ದೊಳ್ಯ ಎಂಬಲ್ಲಿದ್ದು ಗುರವಾರ ಇಲ್ಲಿಂದ ಉದ್ಯೋಗಕ್ಕೆ ತೆರಳಿದ್ದವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಬಗ್ಗೆ ಈಕೆಯ ಗಂಡ ಮಂಗಳೂರಿನ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಾಗಿತ್ತು.
ಶುಕ್ರವಾರ ಸಂಜೆ ಸಾರ್ವಜನಿಕರು ಎಕ್ಕಾರಿನ ಗುಡ್ಡೆಸಾನ ಎಂಬಲ್ಲಿ ಹೋಗುತ್ತಿದ್ದಾಗ ಪಕ್ಕದ ಹಾಳಾದ ರಸ್ತಯ ಸ್ವಲ್ಪ ದೂರ ಮಹಿಳೆಯೋರ್ವರ ಶವ ಸುಟ್ಟ ರೀತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಅವರು ಬಜ್ಪೆ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬಜ್ಪೆಯ ಇನ್ಸ್ಪೆಕ್ಟರ್ ಟಿ,ಡಿ, ನಾಗರಾಜ್ ನೇತೃತ್ವದ ತಂಡ ತನಿಖೆ ಕೈಗೊಂಡಿದ್ದಾರೆ.
ಮಹಿಳೆ ಶವದ ಬಳಿಯ ಮರಗಳು ಸುಟ್ಟುಹೋಗಿದೆ. ಪಕ್ಕದಲ್ಲಿ ಸೀಮೆಎಣ್ಣೆಯ ಕ್ಯಾನ್, ನೀರಿನ ಬಾಟಲ್ ಹಾಗೂ ಬ್ಯಾಗ್ ಪತ್ತೆಯಾಗಿದೆ, ಬ್ಯಾಗ್ನಲ್ಲಿ ಕರಿಮಣಿ ಹಾಗೂ ಮೊಬೈಲ್ ಪತ್ತೆಯಾಗಿದೆ. ಅಲ್ಲದೆ ಡೆತ್ನೋಟ್ ಕೂಡಾ ಪತ್ತೆಯಾಗಿದ್ದು, ನನ್ನ ಪರಿಸ್ಥಿತಿ ನನ್ನ ಇಬ್ಬರು ಮಕ್ಕಳಿಗೆ ಆಗಬಾರದು ಎಂದು ಬರೆದಿದ್ದಾರೆನ್ನಲಾಗಿದೆ.
ಮಹಿಳೆಯ ನಾಪತ್ತೆಯ ಜಾಡು ಹಿಡಿದಿದ್ದ ಗ್ರಾಮಾಂತರ ಪೊಲೀಸರು ಆಕೆಯ ಮೊಬೈಲ್ ಟವರ್ ಲೊಕೇಶನ್ ಪತ್ತೆಹಚ್ಚಿದಾಗ ಕಟೀಲು ಸಮೀಪದ ಎಕ್ಕಾರು ತೋರಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ, ಈಕೆ ಯಾಕಾಗಿ ಮೃತಪಟ್ಟಿದ್ದಾರೆನ್ನುವುದು ನಿಗೂಢವಾಗಿ ಉಳಿದಿದೆ.
ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಮೂಲಗಳಿಂದ ವ್ಯಕ್ತವಾಗಿದೆ. ಅಲ್ಲದೆ ಅವರು ಕೆಲವು ದಿನಗಳಿಂದ ಔಷಧಿ ಸ್ವೀಕರಿಸುತ್ತಿದ್ದು, ಕಳೆದ ಸ್ವಲ್ಪ ದಿನದ ಹಿಂದೆ ಔಷಧಿ ಸ್ವೀಕರಿಸುತ್ತಿರಲಿಲ್ಲ ಎಂಬ ವರ್ತಮಾನ ಸಿಕ್ಕಿದೆ. ಉಷಾ ಅವರು ಎಕ್ಕಾರ್ಗೆ ಹೇಗೆ ಬಂದಿದ್ದಾರೆ, ಯಾವಾಗ ಬಂದಿದ್ದಾರೆ, ಇಲ್ಲಿನ ನಿರ್ಜನ ಪ್ರದೇಶವನ್ನೇ ಯಾಕೆ ಆಯ್ಕೆ ಮಾಡಿದ್ದಾರೆ ಎಂಬುವುದು ನಿಗೂಢವಾಗಿ ಉಳಿದಿದೆ, ಬಜ್ಪೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



