ಬಂಟ್ವಾಳ: ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ನಲಿಕಲಿ ಪದ್ದತಿ ಮಕ್ಕಳಲ್ಲಿನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ, ಸ್ವಕಲಿಕೆ ಮಕ್ಕಳಲ್ಲಿ ಉಂಟುಮಾಡುವ ಆನಂದ ಅಪರಿಮಿತ ಎಂದು ಕ್ಷೇತ್ರ ಶಿಕ್ಷಣ ಇಲಾಖೆಯ ಸಿಆರ್ ಪಿ ಗಂಗಾಧರ್ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಂಟ್ವಾಳ ಪ್ರೆಸ್ಕ್ಲಬ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ರಜತವರ್ಷಾಚರಣೆಯ ಪ್ರಯುಕ್ತ ಬಿ.ಸಿ.ರೋಡಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಲ್ಲಿ ಶಿಕ್ಷಕರಿಗಾಗಿ ನಡೆಯುತ್ತಿರುವ “ಶಾಲಾ ಪಠ್ಯದಲ್ಲಿ ಭಾಷೆ, ಭಾವ, ಅಭಿವ್ಯಕ್ತಿ -ಶಿಕ್ಷಣದಲ್ಲಿ ರಂಗಕಲೆ- ಆಟ-ಪಾಠ ಕುರಿತ ಕಾರ್ಯಗಾರದಲ್ಲಿ ನಲಿಕಲಿಯ ವಿವಿಧ ಆಯಾಮಗಳ ಕುರಿತು ತರಬೇತಿ ನೀಡಿದರು. ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿನ 1ರಿಂದ 4 ನೇ ತರಗತಿ ವರೆಗಿನ ಮಕ್ಕಳ ಕಲಿಕಾ ಕ್ರಮದಲ್ಲಿ ನಲಿಕಲಿಯ ಕೆಲಮಾದರಿಗಳನ್ನು ಬಳಸಿಕೊಂಡರೆ, ಬೋಧನಾಶೈಲಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಹೊಸತನದ ಹುಡುಕಾಟದ ಬಗ್ಗೆ ಮಾತನಾಡಿದ ಅಕ್ಷರ ಪ್ರತಿಷ್ಠಾನದ ಸಂಚಾಲಕ ಗೋಪಾಲ ಅಂಚನ್ ಅವರು. ಶಿಕ್ಷಕರು ಪ್ರತೀ ಹಂತದಲ್ಲೂ ಅಪ್ಡೇಟ್ ಆಗಬೇಕು, ಮಕ್ಕಳ ಮಾನಸಿಕ ವೇಗಕ್ಕೆ ತಮ್ಮನ್ನು ತಾವು ತೆರೆದುಕೊಳ್ಳುವಷ್ಟು ವಿಸ್ತಾರ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಆಟ-ಪಾಠದ ಪರಿಚಯ ಹಾಗೂ ತರಗತಿಯಲ್ಲಿನ ಕ್ರಿಯಾಶೀಲತೆಯ ಬಗ್ಗೆ ಪತ್ರಕರ್ತ ಮೌನೇಶ್ ವಿಶ್ವಕರ್ಮ ಕಾರ್ಯಗಾರ ನಡೆಸಿಕೊಟ್ಟರು. ಆಟಗಳು ಪಾಠಗಳಾಗಿ-ಪಾಠಗಳು ಆಟಗಳಾಗಿ ಮಕ್ಕಳ ಮನಸ್ಸನ್ನು ಗೆಲ್ಲಬೇಕು, ಸಂತಸ ಹಾಗೂ ಲವಲವಿಕೆಯಿಂದ ಕೂಡಿದ ವಾತಾವರಣ ಮಕ್ಕಳ ಕಲಿಕೆಗೆ ಹೆಚ್ಚು ಅನುಕೂಲಕರ ಎಂದು ಅಭಿಪ್ರಾಯಿಸಿದರು.
ಶಿಬಿರಾಧಿಕಾರಿ ಸಂದೀಪ್ ಸಾಲ್ಯಾನ್, ರಜತ ವರ್ಷಾಚರಣೆ ಸಮಿತಿಯ ಸಂಚಾಲಕ ಹರೀಶ್ ಮಾಂಬಾಡಿ, ಕೋಶಾಧಿಕಾರಿ ಕಿಶೋರ್ ಪೆರಾಜೆ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನದೇವ್ ಪುಂಜಾಲಕಟ್ಟೆ, ಸದಸ್ಯ ಚಂದ್ರಶೇಖರ ಕಲ್ಮಲೆ ಹಾಜರಿದ್ದರು.

