ಮುಂಬಯಿ, ಡಿ.13: ನಾನು ವೃತ್ತಿ ಹರಸಿ ಹತ್ತಾರು ವರುಷ ವಿದೇಶ ಸೇರಿದರೂ ನನ್ನಲ್ಲಿ ಮಾತೃಭಾಷಾಭಿಮಾನ ಮಾತ್ರ ಮರೆಯಾಗಿಲ್ಲ. ಭಾಷೆಯಲ್ಲಿ ದೇವರನ್ನೂ ಆ ಮೂಲಕ ಪ್ರೀತಿಯನ್ನೂ ಕಂಡು ಧನ್ಯನೆಣಿಸಿದ್ದೇನೆ. ಸದ್ಯ ಆಂಗ್ಲಮಾಧ್ಯಮ ಭಾಷೆಯಲ್ಲಿ ಪತ್ರಿಕೆಯನ್ನು ನಡೆಸುತ್ತಿದ್ದರೂ ಮಾತೃಭಾಷಾಭಿಮಾನ ಮಾತ್ರ ಮೊದಲಿನಂತಿದೆ. ನಾವು ಕೊಂಕಣಿ ಬರಹಗಾರರು, ಪ್ರಗತಿಶೀಲ ಲೇಖಕರು ಒಗ್ಗೂಡಿ ನಮ್ಮ ಅಗತ್ಯಗಳಿಗಾಗಿ ಹೋರಾಡಬೇಕು. ಪರರ ಪ್ರೀತಿಗಾಗಿ ಬಾಳಬೇಕು. ನಮ್ಮ ಜನತೆಗೆ ಅನೇಕ ಅಗತ್ಯಗಳ ಅವಶ್ಯವಿದೆ ಅವರಿಗಾಗಿ ಶ್ರಮಿಸಿ ನಮ್ಮ ಉದ್ದೇಶಗಳನ್ನು ಪರಿಪೂರ್ಣ ಗೊಳಿಸೋಣ ಎಂದು ದಾಯ್ಜಿವರ್ಡ್ ಆಂಗ್ಲ ಸಾಪ್ತಾಹಿಕದ ಸಂಪಾದಕ, ಹಿರಿಯ ಲೇಖಕ ಹೇಮಾಚಾರ್ಯ (ಸ್ಟೇಫನ್ ಮಸ್ಕರೇನ್ಹಾಸ್ ಮಂಗಳೂರು) ತಿಳಿಸಿದರು.
ಅಂಧೇರಿ ಪೂರ್ವದ ಮಹಾಕಾಳೀ ಕೇವ್ಸ್ ರಸ್ತೆಯಲಿನ ಗ್ಯಾನ್ ಆಶ್ರಮದಲ್ಲಿ ಇಂದಿಲ್ಲಿ ಭಾನುವಾರ ಅಪರಾಹ್ನ ಮಹಾನಗರ ಮುಂಬಯಿ ಅಲ್ಲಿನ ಕೊಂಕಣಿ ಬರಹಗಾರರು, ಕಲಾಕಾರರು, ಸಂಗೀತಕಾರರು ಮತ್ತು ಕೊಂಕಣಿ ಕಾರ್ಯಕರ್ತರಿಗಾಗಿ ಪ್ರಗತಿಶೀಲ್ ಕೊಂಕ್ಣಿ ಬರವ್ಪಿ ಸಂಸ್ಥೆಯು ಆಯೋಜಿಸಿದ್ದ `ಕೊಂಕ್ಣಿ ಸಹಮಿನ್-2015′ ರಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಹೇಮಾಚಾರ್ಯ ನುಡಿದರು.
ಕಾಣಿಕ್ ಕೊಂಕಣಿ ಮಾಸಿಕದ ಸ್ಥಾಪಕ ಸಂಪಾದಕ ಆಂಡ್ರ್ಯೂ ಮೆಂಡೋನ್ಸಾ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಹಮಿನವನ್ನು ಗ್ಯಾನ್ ಆಶ್ರಮದ ಸಂಗೀತ ನಿರ್ದೇಶಕ ರೆ| ಫಾ| ಸಿರಿಲ್ ಡಿ’ಸೋಜಾ ಕೆಂಳ್ಬೆಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಹಾಗೂ `ಪಯ್ಣಾರಿಡಾಟ್ಕಾಮ್’ ವೆಬ್ಸೈಟ್ನ್ನು ಲೋಕಾರ್ಪಣೆಗೈದರು.
ಕಾರಣಾಂತರ ನಾನು ಕೊಂಕಣಿಯಿಂದ ದೂರವಿದ್ದರೂ ಭಾಷೆಯನ್ನು ಮಾತ್ರ ಹೃದಯಪೂರ್ವಕವಾಗಿ ಪ್ರೀತಿಸಿ ಬಾಳುತ್ತಿದ್ದೇನೆ.ಎಂದು ಫಾ| ಸಿರಿಲ್ ಡಿ’ಸೋಜಾ ತಿಳಿಸಿ ಮೆಲ್ವಿನ್ ಪೆರಿಸ್ ಅವರ ಹಾಡನ್ನು ಇಂಪಾಗಿ ಹಾಡುತ್ತಾ ನೆರೆದ ಸಭಿಕರಲ್ಲಿ ಅಚ್ಚರಿ ಮೂಡಿಸಿದರು.
ಹಿರಿಯ ಲೇಖಕ ಜಿಯೋ ಆಗ್ರರ್ (ಜ್ಯೋ ಡಿ’ಸಿಲ್ವಾ) ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಚ್ಛ ಕೊಂಕಣಿ ನಮ್ಮ ಆಶಯವಾಗಿದೆ. ಸಮಾಜದ ಸ್ವಸ್ಥತೆಗೆ ಜಾಗೃತಿ ನೀಡುವ ತಾಕತ್ತು ಸಾಹಿತಿ, ಲೇಖಕರಿಗಿದೆ. ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜ ಮತ್ತು ಮಾತ್ರುಭಾಷೆಯನ್ನು ಬೆಳೆಸ ಬಹುದು ಎಂದರು.
ಮೆಲ್ವಿನ್ ನೇರಿ ನಜ್ರೇತ್ `ಪಯ್ಣಾರಿಡಾಟ್ಕಾಮ್’ ವೆಬ್ಸೈಟ್ನ ಬಗ್ಗೆ ಮಾಹಿತಿಯನ್ನಿತ್ತರು. ಹಾಗೂ ಪ್ರಧಾನ ಸಂಘಟಕ ವಲ್ಲಿ ಕ್ವಾಡ್ರಸ್ ಅವರನ್ನು ಸ್ಥೂಲವಾಗಿ ಪರಿಚಯಿಸಿದರು. ಪ್ರಸನ್ನ ನಿಡ್ಡೋಡಿ, ಲಾರೇನ್ಸ್ ಡಿ’ಸೋಜಾ ಕಮಾನಿ, ನೇರಿ ನಜ್ರೇತ್ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಸಹಮಿಲನದ ಪ್ರಮುಖ ರೂವಾರಿ, ಹಿರಿಯ ಕವಿ ವಲ್ಲಿ ಕ್ವಾಡ್ರಸ್ (ವಲೇರಿಯನ್ ಕ್ವಾಡ್ರಸ್) ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿ ಕೃತಜ್ಞತೆ ಸಮರ್ಪಿಸಿದರು.
ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಅಧ್ಯಕ್ಷ ಜೋನ್ ಡಿ’ಸಿಲ್ವಾ, ಮಹಾರಾಷ್ಟ್ರ ಕೊಂಕಣ್ ಅಸೋಸಿಯೇಶನ್ನ ಸ್ಥಾಪಕಾಧ್ಯಕ್ಷ ಲಿಯೋ ಫೆರ್ನಾಂಡಿಸಿ ಜೆರಿಮೆರಿ, ಹಿರಿಯ ಸಂಗೀತಕಾರರುಗಳಾದ ಲಾರೇನ್ಸ್ ಸಲ್ಡನ್ಹಾ, ಹೆನ್ರಿ ಡಿ’ಸೋಜಾ ಗೋರೆಗಾಂ, ಕೊಂಕಣಿ ವೆಲ್ಫೇರ್ ಅಸೋಸಿಯೇಶನ್ ಮೀರಾರೋಡ್ ಅಧ್ಯಕ್ಷ ಜಾನ್ ಕ್ರಾಸ್ತ, ಕಾರ್ಯದರ್ಶಿ ಅರುಣ್ ನೊರೋನ್ಹಾ, ಕೋಶಾಧಿಕಾರಿ ಲಾರೇನ್ಸ್ ಮಥಾಯಸ್, ಹಿಲಾರಿ ಡಿ’ಸಿಲ್ವಾ ನಿಡ್ಡೋಡಿ, ಫ್ರಾನ್ಸಿಸ್ ಒಲಿವೆರಾ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವಲ್ಲಿ ಕ್ವಾಡ್ರಸ್ ಅಧ್ಯಕ್ಷತೆಯಲ್ಲಿ ಕೊಂಕಣಿ ಕವಿಗೋಷ್ಠಿ ನಡೆದಿದ್ದು, ಹಿರಿಯ ಕವಿ ವಿ. ಡಿ’ಸಿಲ್ವಾ, ರೀಟಾ ಅಲ್ಬುರ್ಕರ್ಕ್ , ನೇರಿ ನಜ್ರೇತ್ ಮುಂತಾದ ಕವಿಗಳು ಪಾಲ್ಗೊಂಡು ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ಅಂಗವಾಗಿ ಜೆರಿ ಬೊಂದೆಲ್, ಲ್ಯಾನ್ಸಿ ಡಿ’ಸೋಜಾ ಮತ್ತು ಡೆಲೀಶಾ ಡಿ’ಸೋಜಾ ಕೊಂಕಣಿ ಹಾಡನ್ನು ಪ್ರಸ್ತುತ ಪಡಿಸಿದರು. ನಂತರ ವಲ್ಲಿ ಕ್ವಾಡ್ರಸ್ ರಚಿಸಿ, ಹಿಲಾರಿ ಡಿ’ಸಿಲ್ವಾ ನಿರ್ದೇ ಶಿಸಿದ `ಖಣ್’ ಕಿರು ನಾಟಕವನ್ನು ಮೀರಾರೋಡ್ನ ಕೊಂಕಣಿ ಕಲಾವಿದರು ಪ್ರದರ್ಶಿಸಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್








