ಭಾರತೀಯರು ಪುರಾತನ ಕಾಲದಿಂದಲೂ ಸೂರ್ಯನನ್ನು ಪೂಜಿಸುತ್ತಾ ಬಂದಿದ್ದಾರೆ. ಶಾರೀರಿಕ ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸುಸ್ತಿತಿಯಲ್ಲಿ ಇಟ್ಟು ಕೊಳ್ಳಲು ನೆರವಾಗುವ ಪುರಾತನ ಭಾರತೀಯ ವ್ಯಾಯಾಮಗಳಲ್ಲಿ ಅತ್ಯಂತ ಮಹತ್ವದ ಸ್ಥಾನ ಪಡೆದಿರುವುದು ಸೂರ್ಯ ನಮಸ್ಕಾರ. ಇದಕ್ಕೆ ವೇದ ಕಾಲದಿಂದಲೂ ತನ್ನದೇ ಆದ ಮಹತ್ವವಿದೆ. ಇದನ್ನು ವ್ಯಾಯಾಮ ಎಂದಷ್ಟೇ ಕರೆಯದೆ ಪ್ರಾರ್ಥನೆ ಮತ್ತು ನಮಸ್ಕಾರದ ಪಟ್ಟಿಯಲ್ಲಿ ಇದು ಬರುತ್ತದೆ. ಹೀಗಾಗಿ ಹಿರಿಯರು ದೈನಂದಿನ ಚಟುವಟಿಕೆಯ ಒಂದು ಭಾಗವಾಗಿ ಇದನ್ನು ಸ್ವೀಕರಿಸಿದ್ದಾರೆ.
ಹಠ ಯೋಗದಲ್ಲಿ ಸೂರ್ಯ ನಮಸ್ಕಾರದ ಪ್ರಸ್ತಾಪವಿದ್ದು, ಇದೊಂದು ಹನ್ನೆರಡು ಯೋಗಾಸನಗಳ ಒಂದು ಚಕ್ರ . ಸೂರ್ಯ ದೇವನಿಗೆ ಸಂಬಂಧಿಸಿದ ಬೀಜ ಮಂತ್ರವನ್ನು ಉಚರಿಸುತ್ತ ಪ್ರಾಣಾಯಾಮದ ರೀತಿಯಲ್ಲಿ ಉಸಿರನ್ನೆಳೆದು ಕೊಂಡು ಅದನ್ನು ಬಿಗಿ ಹಿಡಿದು ಕೊಂಡು ಮತ್ತೆ ಹೊರಗೆ ಬಿಡುತ್ತಾ ಮಾಡ ಬಹುದಾದ ವ್ಯಾಯಾಮವೇ ಸೂರ್ಯ ನಮಸ್ಕಾರ. ಸೂರ್ಯ ನಮ್ಮ ಆರೋಗ್ಯವನ್ನು ವೃದ್ಧಿಸುವ ಜೀವಸತ್ವಗಳ ಗಣಿ. ದೇಹಕ್ಕೆ ಅವಶ್ಯಕವಾದ “ಡಿ” ಜೀವಸತ್ವವನ್ನು ಉತ್ಪಾದಿಸುವ ಏಕೈಕ ಮೂಲ ಸೂರ್ಯ. “ಡಿ” ಜೀವಸತ್ವದ ಕೊರತೆಯುಂಟಾದಾಗ ಹೃದ್ರೋಗ, ಕ್ಷಯ, ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಬಾಧಿಸುವ ಸಾಧ್ಯತೆಗಳಿವೆ. ಮುಂಜಾನೆಯ ಸೂರ್ಯ ಕಿರಣಗಳೊಂದಿಗೆ ಮಾಡುವ ಸೂರ್ಯ ನಮಸ್ಕಾರವು ದೇಹದ ರಕ್ತ ಸಂಚಾರವನ್ನು ಸುಲಲಿತಗೊಳಿಸಿ ರಕ್ತದೊತ್ತಡ ಹಾಗೂ ಕೊಬ್ಬನ್ನು ನಿಯಂತ್ರಿಸುತ್ತದೆ.
ಇದಕ್ಕೂ ಮಿಗಿಲಾಗಿ ತನು ಮನಕ್ಕೆ ಚೈತನ್ಯ ತುಂಬುವ ಉಚಿತ ಔಷಧಿ ಎಂದರೆ ಸೂರ್ಯನ ಬೆಳಕು. ಕತ್ತಲಲ್ಲಿರುವ ಗಿಡ, ಮರ, ಬಳ್ಳಿಗಳು ಕೂಡಾ ಸೂರ್ಯನ ಬೆಳಕಿಗೆ ಕತ್ತು ಚಾಚುತ್ತವೆ. ಬೆಳಕಿನೆಡೆಗೆ ಬಾಗುತ್ತವೆ. ಸೂರ್ಯನ ಬೆಳಕಿನ ಕೊರತೆ ಮನುಷ್ಯನ ಖಿನ್ನತೆಗೆ ಕಾರಣವಾಗುವುದಲ್ಲದೆ ಜೀವನದಲ್ಲಿ ಬೇಸರ ಜಿಗುಪ್ಸೆ ಹುಟ್ಟಿಸ ಬಲ್ಲುದು. ಇದನ್ನು ತಪ್ಪಿಸಲು ಮುಂಜಾನೆಯ ಹಾಗೂ ಸಾಯಂಕಾಲದ ಬಿಸಿಲಿಗೆ ಮೈ ಒಡ್ಡುವುದು ಪ್ರಯೋಜನಕಾರಿ ಅಂತಾರೆ ವಿಜ್ಞಾನಿಗಳು.
ಆದರೆ ಇಂದು ಬೆಳಿಗ್ಗೆ ಬೇಗನೆ ಏಳುವ ಅಬ್ಯಾಸ ಕಡಿಮೆಯಾಗುತ್ತಿದೆ. ಬೆಳಿಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮೊದಲು ಅಥವಾ ಸೂರ್ಯನ ಜೊತೆಗಾದರೂ ಏಳುವುದು ಅತ್ಯಂತ ಶ್ರೇಯಸ್ಕರ. ಮುಂಜಾನೆ ಬೇಗ ಏಳುವುದು ಆರೋಗ್ಯದ ದೃಷ್ಟಿಯಿಂದ ಹಿತಕಾರಿ ಅನ್ನುವುದಕ್ಕೆ ಸಾಕಷ್ಟು ವಿಜ್ಞಾನಿಕ ಕಾರಣಗಳಿದ್ದರೂ ಅದಕ್ಕೂ ಮಿಗಿಲಾಗಿ ಮುಂಜಾನೆಯ ಪ್ರಶಾಂತ ಹಾಗೂ ಸುಂದರ ವಾತಾವರಣವನ್ನು ಅನುಭವಿಸುತ್ತ ಆ ಸಂದರ್ಭದಲ್ಲಿ ನಡಿಗೆ, ವ್ಯಾಯಾಮ, ಸೂರ್ಯ ನಮಸ್ಕಾರ, ಧ್ಯಾನ, ಜಪ ತಪಗಳಲ್ಲಿ ತೊಡಗಿಸಿ ಕೊಳ್ಳುವುದರಿಂದ ಆರೋಗ್ಯದ ದೃಷ್ಟಿಯಿಂದ ಗರಿಷ್ಟ ಲಾಭವಿದೆ.
ತನು ಮನಗಳಿಗೆ ಮುಂಜಾನೆ ದೊರೆತ ಚೈತನ್ಯ ಇಡೀ ದಿನ ನಮ್ಮನ್ನು ಉಲ್ಲಸಿತರನ್ನಾಗಿ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಯೋಜನಕಾರಿಯಾದಂತಹ ಮುಂಜಾನೆಯ ಎಳೆ ಬಿಸಿಲು ಮುಂಜಾನೆಯಲ್ಲಿ ಮಾತ್ರ ಲಭ್ಯ. ಆದ್ದರಿಂದಲೇ ಆರೋಗ್ಯದ ಕಾಳಜಿ ಹೊಂದಿರುವವರು, ಆಧ್ಯಾತ್ಮಿಕ ಸಾಧಕರೆಲ್ಲರೂ ನಸುಕಿನಲ್ಲಿಯೇ ಸೂರ್ಯನ ಸ್ವಾಗತಕ್ಕೆ ಆತನ ಆರಾಧನೆಗೆ ಸಿದ್ಧರಾಗುತ್ತಾರೆ. ಒಟ್ಟಿನಲ್ಲಿ ವ್ಯಕ್ತಿತ್ವದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಸೂರ್ಯ ನಮಸ್ಕಾರವು ಜಾತಿ ಮತ ಪಂಥಗಳನ್ನು ಮೀರಿ ಎಲ್ಲಾ ವಯೋಮಾನದ ಜನರಿಗೂ ಅನ್ವಯವಾಗುವಂಥ ಒಂದು ವಿಶಿಷ್ಟಪೂರ್ಣ ವ್ಯಾಯಾಮ ಆಗಿದೆ.
ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನಿಗೆ ಕೈಯಲ್ಲಿ ಕೆಂಪು ಕಮಲಗಳು ಕೆಂಪು ರಥದಲ್ಲಿ ರಥಿಕ, ಅರುಣನೇ ಇವಗೆ ಸಾರಥಿ. ರಥಕ್ಕೆ ಕಟ್ಟಿರುವ ಕುದುರೆಗಳು ಹೀಗೆ ವರ್ಣನೆ ಬರುತ್ತದೆ.
ಈ ಗ್ರಹವನ್ನು ಸ್ತುತಿಸುವ ಸ್ತೋತ್ರ ಹೀಗಿದೆ. ಈ ಶ್ಲೋಕವನ್ನು ಹತ್ತು ಬಾರಿಯೋ, ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿ ಕೊಳ್ಳ.ಬಹುದು.
ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |
ಧ್ವಾಂತಾರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||
“ಕೆಂಪು ದಾಸವಾಳ ಪುಷ್ಪದ ಕಾಂತಿ, ಕಶ್ಯಪನ ಮಗ, ಮಹಾತೇಜಸ್ವಿ, ಕತ್ತರ ಕಡುವೈರಿ, ಸರ್ವಪಾಪ ನಾಶಕ, ಇಂತಹಾ ದಿವಾಕರನನ್ನು ನಮಿಪೆ”.
ಸೂಕ್ಷ್ಮ ಗುಂಗುರು ಕೂದಲುಗಳಿಂದ ಒಪ್ಪುವ ತಲೆ. ಆಕರ್ಷಕ ರೂಪ ಚೇತೋಹಾರಿಯಾದ ಗಂಭೀರ ಧ್ವನಿ. ಹೆಚ್ಚು ಎತ್ತರವಿಲ್ಲದ ನಿಲುವು. ಅನುಪಮ ಬುದ್ಧಿ ಚಾತುರ್ಯ. ಗೋರೋಚನದಂತೆ ಕೆಂಪು ಬೆರೆತ ಸುಂದರ ಕಣ್ಗಳು. ಧೈರ್ಯಶಾಲಿ ಪ್ರಚಂಡ. ಪಿತ್ತ ಪ್ರಕೃತಿ, ಉನ್ನತ ವ್ಯಕ್ತಿತ್ವ. ದೊಡ್ಡ ಕೈಗಳು. ಕೆಂಪು ಉಡುಗೆ, ಇದು ರವಿಯನ್ನು ಶಾಸ್ತ್ರಾಕಾರರು ಗುರುತಿಸುವ ಬಗೆ.
ಆದಿತ್ಯ,ಮಾರ್ತಾಂಡ, ಭಾನು, ರವಿ, ದಿವಾಕರ, ಪ್ರಭಾಕರ ಇವು ಸೂರ್ಯನ ಪ್ರಸಿದ್ಧ ಹೆಸರುಗಳು. ಅದಿತಿ- ಕಶ್ಯಪರ ಮಗ. ಅದೊಂದು ದಿನ ಕಶ್ಯಪರು ಮನೆಯಲ್ಲಿ ಇರಲಿಲ್ಲ. ಅದಿತಿ ದೇವಿ ತುಂಬು ಗರ್ಭಿಣಿ. ದೇವರ ಧ್ಯಾನದಲ್ಲಿದ್ದಾಳೆ. ಹೊರಗಿನಿಂದ ಭವತಿ ಭಿಕ್ಷಾಂಧೇಹಿ ಎಂಬ ಮಾಣವಕನ ಧ್ವನಿ. ಬುಧನು ಭಿಕ್ಷೆಗಾಗಿ ಬಂದಿದ್ದ. ಕರೆದ ಕೂಡಲೇ ಭಿಕ್ಷೆಗೆ ಬರಲಿಲ್ಲವೆಂಬ ಸಿಟ್ಟು ಬುಧನಿಗೆ. ಏನು ಗರ್ಭಿಣಿ ಎಂಬ ಅಹಂಕಾರವೋ? ಗರ್ಭದಲ್ಲಿರುವ ಆ ಶಿಶು ಸತ್ತು ಹೋಗಲಿ ಎಂಬ ಶಾಪವಾಗಿ ಆ ಸಿಟ್ಟು ಸ್ಪೋಟಗೊಂಡಿತು. ಆಕೆ ತತ್ತರಿಸಿ ಬಿದ್ದಳು. ಮೃತವಾದ ಅಂಡದಲ್ಲಿ ಮತ್ತೆ ಕಾಣಿಸಿದ ಆ ಶಿಶು ಶ್ರೀಹರಿಯ ಮಹಿಮೆಯಿಂದ ಕಶ್ಯಪರ ಪ್ರಭಾವದಿಂದ ಸತ್ತು ಬದುಕಿತು. ಈ ಮಗುವೇ ಸೂರ್ಯ. ಆದ್ದರಿಂದಲೇ ಮಾರ್ತಾಂಡ ಆದಿತ್ಯ ಎಂಬುದು ಇವನ ಇನ್ನೊಂದು ಹೆಸರು. ಅದಿತಿಯ ಮಗನೆಂಬ ಕಾರಣದಿಂದ ಮಾತ್ರ ಇವನಿಗೆ ಈ ಹೆಸರಲ್ಲ. ದಿನದಿನವೂ ಉದಯಿಸುತ್ತಾ ಅಸ್ತಮಿಸುತ್ತಾ ಜೀವಜಾತದ ೨೪ ಘಂಟೆಗಳ ಆಯುಷ್ಯವನ್ನು ಕಿತ್ತು ಸಾಗುವುದರಿಂದ ಇವನಿಗೆ ಈ ಹೆಸರು. (ಆಯುರಾದಾಯ ಯಾತೀತಿ ಆದಿತ್ಯಃ) ಸಂಜ್ಞಾ ಮತ್ತು ಛಾಯಾ ಸೂರ್ಯನ ಹೆಂಡಂದಿರು. ಸಂಜ್ಞೆಯಲ್ಲಿ ಯಮ ಯಮುನೆ ಮತ್ತು ಮನು ಹುಟ್ಟಿದರು. ಛಾಯಾ ದೇವಿಯಲ್ಲಿ ಸಾವರ್ಣಿ ಮತ್ತು ಶನೀಶ್ವರ ಎಂಬ ಈರ್ವರು ಹುಟ್ಟಿದರು. ಈ ಮನ್ವಂತರದ ಅಧಿಪತಿಯಾದ ವೈವಸ್ವತ ಮನು ಸೂರ್ಯನ ಪುತ್ರ. ಗ್ರಹ ಕೋಟಿಯಲ್ಲಿ ಭಯಂಕರನೆನಿಸಿದ ಶನಿಯೂ ರವಿಯ ಕುಮಾರ. ಕರ್ಣ, ಸುಗ್ರೀವರು ಸೂರ್ಯಾಂಶ ಸಂಭೂತರು.
ಶ್ರೀನಿವಾಸ್ ಪ್ರಸಾದ್ ಮಯ್ಯ

