ನಮ್ಮ ಕಂಪನಿಯ ಕ್ರೀಮ್ ಬಳಸಿ, ೬ ರೇ ದಿನಗಳಲ್ಲಿ ಚಂದ್ರನ ಮೈಕಾಂತಿ ಪಡೆಯಿರಿ…ನಮ್ಮ ಕಂಪನಿಯ ಎಣ್ಣೆ ಬಳಸಿ, ೩ ದಿನಕ್ಕೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಹೊಂದಿ… ನಮ್ಮ ಕಂಪನಿ ಸಿಮೆಂಟ್ ಬಳಸಿ ಭೂಕಂಪಕ್ಕೂ ಬೀಳದ ಮನೆ ಕಟ್ಟಿ… ದಿನ ಬೆಳಗಾದರೆ ವೃತ್ತ ಪತ್ರಿಕೆ, ಟಿ.ವಿ. ರೇಡಿಯೋ ಎಲ್ಲಾ ಮಾಧ್ಯಮಗಳಲ್ಲೂ ಇಂತಹ ಜಾಹೀರಾತುಗಳನ್ನು ನೋಡುತ್ತೇವೆ, ಕೇಳುತ್ತೇವೆ ಹಾಗು ಮರುಳಾಗುತ್ತೇವೆ! ಏನನ್ನು ಬಳಸುವುದು, ಏನನ್ನು ಬಿಡುವುದು ಅರ್ಥವೇ ಆಗುವುದಿಲ್ಲ.
ಭೂಮಿಯ ಮೇಲಿರುವ ಪ್ರತಿಯೊಂದು ವಸ್ತುವಿಗೂ ಜಾಹೀರಾತು. ತಲೆಯ ಪಿನ್ನು, ಬರೆವ ಪೆನ್ನು, ತಿನ್ನುವ ಬನ್ನು, ಕೊಲ್ಲುವ ಗನ್ನು, ಅಸ್ಟೇ ಏಕೆ? ಬ್ರಹ್ಮಾಂಡಕ್ಕೂ ಜಾಹೀರಾತು ಕೊಡುವ ಕಾಲವಿದು. ಗ್ರಾಹಕರ ಗಮನ ಸೆಳೆಯಲು ಇರುವ ಅತ್ಯಂತ ಯಶಸ್ವೀ ಮಾಧ್ಯಮ ಜಾಹೀರಾತುಗಳು. ಪತ್ರಿಕೆಯ ಇಡಿಯ ಪುಟವೇ ನುಂಗುವ, ಟಿ.ವಿ ಗಳಲ್ಲಿ ಕಾರ್ಯಕ್ರಮವನ್ನೇ ನುಂಗುವ ಡೈನೋಸಾರುಗಳು ಈ ಜಾಹೀರಾತು. ಇನ್ನು ಇಂಟರ್ನೆಟ್ ವಿಷಯವಂತೂ ಅನುಭವಿಸಿದವಗೇ ಗೊತ್ತು…!
ನೀವು ಯಾವತ್ತಾದರೂ ಮುಖಕ್ಕೆ ಕ್ರೀಮ್ ಹಚ್ಚಿದ ಮಾತ್ರಕ್ಕೆ ಇಡಿಯ ದೇಹ ಬೆಳ್ಳಗಾಗುವುದನ್ನು ಕಂಡಿದ್ದೀರಾ? ಬಕೆಟ್ನಲ್ಲಿ ಬಟ್ಟೆ, ಡಿಟರ್ಜೆಂಟ್ ಅದ್ದಿಟ್ಟ ಮಾತ್ರಕ್ಕೆ ಬಟ್ಟೆ ಫಳಫಳ ಮಿಂಚುವುದನ್ನು ಕಂಡಿದ್ದೀರಾ? ಅಥವಾ ಒಂದು ಚಾಕಲೇಟು ತಿಂದು ಬುದ್ದಿವಂತನಾಗಿ ಐ.ಎ.ಎಸ್ ನಂತಹ ಪರೀಕ್ಷೆ ಬರೆದು ಪಾಸಾಗುವುದನ್ನು ನೋಡಿದ್ದೀರ? ಸೆಂಟ್ ಹಾಕಿದ ತಕ್ಷಣ ಚಂದದ ಮಿಟಕಲಾಡಿಯರು ಮುತ್ತಿಕೊಂಡಿದ್ದನ್ನ ನೋಡಿದ್ದೀರಾ? ಯಾವುದೋ ಕೆಲಸಕ್ಕೆ ಬಾರದ ಪಾನೀಯ ಕುಡಿದು ಬೆಟ್ಟದ ಮೇಲಿಂದ ಹಾರುವುದನ್ನು ನೋಡಿದ್ದೀರಾ? ಇಲ್ಲ ತಾನೆ?
ಹೌದು, ಕಂಡಿಲ್ಲ, ಕಾಣಲು ಸಾಧ್ಯವೂ ಇಲ್ಲ. ಕೋಟ್ಯಂತರ ರುಪಾಯಿ ವ್ಯಯಿಸಿ ಮಾಡಿದ ಉತ್ಪನ್ನಗಳನ್ನ ಮಾರಲು ಬಹುರಾಷ್ಟ್ರೀಯ ಕಂಪನಿಗಳು ತರಹೇವಾರಿ ಸರ್ಕಸ್ ಗಳನ್ನ ಮಾಡುವರು. ಗ್ರಾಹಕರನ್ನು ಖೆಡ್ಡಾಕ್ಕೆ ಹಾಕಲು ಚಿತ್ರ ವಿಚಿತ್ರ ಜಾಹೀರಾತುಗಳನ್ನ ತೋರಿಸುವರು. ಇಲ್ಲಿ ಹಲವಾರು ಉತ್ಪನ್ನಗಳು ಮಾನವನ ದೇಹಕ್ಕೆ ಮತ್ತು ಪರಿಸರಕ್ಕೆ ಹಾನಿಕಾರಕ. ಆದರೂ ಸತ್ಯವನ್ನ ಮರೆಮಾಚಿ ಗ್ರಾಹಕರನ್ನು ಮರಳು ಮಾಡುವರು. ಇವರಿಗೆ ಜೊತೆಯಾಗುವವರು ಜಾಹೀರಾತು ಏಜೆನ್ಸಿಗಳು ಮತ್ತು ಸೆಲೆಬ್ರಿಟಿಗಳು. ಕಳ್ಳ ಗುರುವಿಗೆ ಚಾಂಡಾಲ ಶಿಷ್ಯರು!
ಬೃಹತ್ ಕಂಪನಿಗಳು ಕೋಟ್ಯಂತರ ರುಪಾಯಿಗಳನ್ನ ಈ ಜಾಹೀರಾತು ಏಜೆನ್ಸಿಗಳ ಹಾಗೂ ಚಿತ್ರ ತಾರೆ, ಕ್ರಿಕೆಟ್ ತಾರೆಗಳ ಮೇಲೆ ಸುರಿಯುತ್ತವೆ. ಆ ಹಣವನ್ನ ನೇರವಾಗಿ ಗ್ರಾಹಕರ ಜೇಬಿಗೆ ವರ್ಗಾಯಿಸುತ್ತವೆ. ಬಡಪಾಯಿ ಗ್ರಾಹಕ ರಂಗುಬಿರಂಗಿ ಜಾಹೀರಾತುಗಳಿಗೆ ಮರುಳಾಗಿ ಒಂದಾಣೆಯ ಉತ್ಪನ್ನವನ್ನು ಹನ್ನೆರಡಾಣೆ ಕೊಟ್ಟು ತಗೊಳ್ಳುತ್ತಾನೆ! ಅದೇ ಈ ಕಂಪನಿಗಳು ಜಾಹೀರಾತುಗಳಿಗೆ ಪೋಲಾಗುವ ಹಣವನ್ನು ಉತ್ಪನ್ನಗಳ ಮಾರುಕಟ್ಟೆ ಬೆಲೆಯನ್ನ ತಗ್ಗಿಸಿ ಗ್ರಾಹಕರಿಗೆ ಉಪಕಾರ ಮಾಡಬಹುದಲ್ಲಾ? ಊಹೂಂ, ಜಪ್ಪಯ್ಯ ಅಂದರೂ ಮಾಡಲ್ಲ.
ಅಸ್ಟು ಮಾತ್ರವಲ್ಲ ಈ ಎಲ್ಲಾ ರೀತಿಯ ಜಾಹೀರಾತುಗಳು ನಮ್ಮ ನಿಮ್ಮ ಮನಸಿನ್ನ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತಿರುತ್ತವೆ! ಕಪ್ಪಗಿರುವುದು ಮಹಾಪಾಪ, ಕಪ್ಪಗಿರುವವರಿಗೆ ಮದುವೆ ಇಲ್ಲ, ಕೆಲಸ ಇಲ್ಲ, ದಪ್ಪಗಿರುವುದು ಬೊಜ್ಜು, ಅವರಿಗೆ ಜೀವನವೇ ದುರ್ಭರ, ಆರೋಗ್ಯ ಪೇಯಗಳನ್ನ ಕುಡಿಯದ ಮಗು ಬೆಳೆಯುವುದಿಲ್ಲ, ಶಾಲೆಯಲ್ಲಿ ಸಹಪಾಠಿಗಳು ಜೊತೆಯಲ್ಲಿ ಆಡಲು ಬರುವುದಿಲ್ಲ, ಮನೆ ಕಾರು ಕೊಳ್ಳಲು ತಾಕತ್ತಿಲ್ಲದವರು ಅಯೋಗ್ಯರು..ಇತ್ಯಾದಿ ಇನ್ನೆಷ್ಟೋ ಇದೇ ತೆರನಾದ ತಪ್ಪು ವಿಚಾರಗಳನ್ನ ಬಲವಂತವಾಗಿ ಗ್ರಾಹಕರ ತಲೆಗೆ ತುರುಕುತ್ತಾರೆ.
ನಮ್ಮ ಮೈಯ ಬಣ್ಣ, ತಲೆಯ ಕೂದಲು, ದೇಹ, ಬುದ್ದಿಮತ್ತೆ ಇವೆಲ್ಲವನ್ನೂ ನಿರ್ಧರಿಸುವುದು ನಮ್ಮ ವಂಶವಾಹಿನಿಗಳು, ನಾವು ಬೆಳೆದು ಬಂದ ಪರಿಸರಗಳು. ಸಾಧನೆಗೆ ಬಣ್ಣ, ದೇಹದ ಆಕಾರ, ತಲೆಯಲ್ಲಿರೋ ಕೂದಲು, ಹಾಕುವ ಚಪ್ಪಲಿಗಳು, ಬಟ್ಟೆಗಳು ಯಾವುದೂ ಮಾನದಂಡವಲ್ಲ. ಸಾಧನೆಗೆ ಪರಿಶ್ರಮ ಮಾತ್ರ ಮಾನದಂಡ ನೆನಪಿಡಿ. ಜಾಹೀರಾತಿನಲ್ಲಿ ಬರುವ ತಾರೆಯರು ಹಣಕ್ಕಾಗಿ ಉತ್ಪನ್ನಗಳನ್ನ ಮಾರಾಟ ಮಾಡುತ್ತಾರೆ ಹೊರತು, ಉತ್ಪನ್ನಗಳನ್ನು ನಿಜವಾಗಿಯೂ ಉಪಯೋಗಿಸುವುದಿಲ್ಲ ಗೊತ್ತಿರಲಿ.
ಇನ್ನು ಉಚಿತಗಳ ಮಾತು ಕೇಳಿ. ಎಣ್ಣೆ ಜೊತೆ ಬಾಚಣಿಗೆ ಉಚಿತ, ಬಾಚಣಿಗೆ ಜೊತೆ ಕೂದಲು ಉಚಿತ. ಏಕೆಂದರೆ ಎಣ್ಣೆ ಬಳಸಿ ಕೂದಲೇ ಇರುವುದಿಲ್ಲವಲ್ಲ ಅದಕ್ಕೆ. ಚಹಾದ ಜೊತೆ ಬಿಸ್ಕಿಟ್ ಉಚಿತ, ಒಂದು ಕೊಂಡರೆ ಇನ್ನೊಂದು ಸಂಪೂರ್ಣ ಉಚಿತ. ಆದರೆ ಆ ಉಚಿತವಾಗಿ ಸಿಗುವ ಉತ್ಪನ್ನದ ಬೆಲೆ ಮೊದಲನೇ ಉತ್ಪನ್ನದಲ್ಲೇ ಅಡಗಿರುವಿದು ಖಚಿತ. ಮುಂದೆ ಅಪ್ಪ ಕೊಂಡರೆ ಅಮ್ಮ ಉಚಿತ, ಗಂಡ ಕೊಂಡರೆ ಹೆಂಡತಿ ಹಾಗೂ ಹೆಂಡತಿ ಕೊಂಡರೆ ಮಗು ಉಚಿತ ಕಾಲವೂ ಬರಬಹುದೇನೋ…
ಗ್ರಾಹಕ ಅರಿತೋ ಅರಿಯದೆಯೋ ಇದರಿಂದ ಪ್ರಭಾವಿತನಾಗುತಾನೆ. ಹಾಗು ತನ್ನ ದಿನಚರಿಯನ್ನ ಜಾಹೀರಾತಿಗನುಗುಣವಾಗಿ ಬದಲಾಯಿಸುತ್ತಾನೆ. ಅಚ್ಚುಕಟ್ಟಾಗಿ ಚಹಾ ಕುಡಿಯುತ್ತಿದ್ದವನು ಗ್ರೀನ್ ಟೀ ಕುಡಿಯಲು ತೊಡಗುತ್ತಾನೆ. ೧೨ ರುಪಾಯಿಯಲ್ಲಿ ಆಗುತ್ತಿದ್ದ ಚಹಾಕ್ಕೆ ೨೦೦ ರುಪಾಯಿ ತೆರುತ್ತಾನೆ! ಏಕೆ? ದೇಹಕ್ಕೆ ಒಳ್ಳೇದಂತೆ ಅದಕ್ಕೆ. ಉಪ್ಪಿಟ್ಟು, ಪೂರಿ ಬಾಜಿ ಬಿಟ್ಟು, ಓಟ್ಸ್, ಕಾರ್ನ್ ಫ಼್ಲೇಕ್ಸು ತಿನ್ನುತ್ತಾನೆ. ೨೦ ರುಪಯಿ ಪೂರಿ ಬಾಜಿ ಎಲ್ಲಿ? ೨೦೦ ರುಪಾಯಿ ಓಟ್ಸ್ ಎಲ್ಲಿ. ನಿರುಪದ್ರವಿ ತೆಂಗಿನೆಣ್ಣೆ ಬಿಡುತ್ತಾನೆ, ಕೊಲೆಸ್ಟರೊಲ್ ಇಲ್ಲದ ಎಣ್ಣೆ ಬಳಸುತ್ತಾನೆ. ಬೊಜ್ಜು ಬರಬಾರದು ನೋಡಿ ಸ್ವಾಮಿ, ಅದಕ್ಕೆ! ಹ್ಯಾಂಡ್ ವಾಷ್ ನಿಂದ ಕೈ ತೊಳೆಯದ್ದಿದ್ದರೆ ಕೀಟಾಣುಗಳು ನಿಮ್ಮನ್ನು ಸುಮ್ಮನೆ ಬಿಡೊಲ್ಲ ಕೇಳಿ.
ಅದೇನು ಕರ್ಮವೋ ನೋಡಿ, ಈ ಜಾಹೀರಾತುಗಳಿಂದಾಗಿ ಮಾನವ ತನ್ನನ್ನು ತಾನು ಬದಲಾಯಿಸಿಕೊಡಿದ್ದಾನೆ. ಹಿರಿಯರು ಮಾಡುವ ಅಡುಗೆ ಓಲ್ಡ್ ಫ಼್ಯಾಶನ್, ಹೇಳೋ ಮಾತು ಅಡುಗೂಲಜ್ಜಿ ಕಥೆ ಅಂತಾನೆ. ಇಷ್ಟೆಲಾ ಮಾಡಿಯೂ ನಲುವತ್ತಕ್ಕೇ ನೆಗೆದು ಬಿದ್ದು ನೆಲ್ಲಿಕಾಯಿ ಆಗುತ್ತಾನೆ. ಹಿರಿಯರು ತಂಗಳನ್ನ ಉಂಡು, ದುಡಿಮೆ ಮಾಡಿ, ಕಣ್ತುಂಬ ನಿದ್ದೆ ಮಾಡಿ ಬದುಕುತ್ತಿದ್ದುದು ಬರೋಬ್ಬರಿ ನೂರು ವರುಷ! ನಲುವತ್ತೆಲ್ಲಿ?
ನೂರೆಲ್ಲಿ?
ಜಗಮಗಿಸುವ ಜಾಹೀರಾತುಗಳಿಗೆ ಮರುಳಾಗಿ ಉತ್ಪನ್ನಗಳನ್ನ ಖರೀದಿಸುವ ಮುನ್ನ ಒಮ್ಮೆ ಯೋಚಿಸಿ. ಉತ್ಪನ್ನಗಳ ಗುಣಮಟ್ಟ, ಬೆಲೆ ಎಲ್ಲವನ್ನೂ ಪರೀಕ್ಷಿಸಿ. ಮಾರುಕಟ್ಟೆಯಲ್ಲಿ ಇಷ್ಟೋ ಒಳ್ಳೆಯ ಉತ್ಪನ್ನಗಳಿರುತ್ತವೆ. ಜಾಹೀರಾತು ಇಲ್ಲವೆಂದ ಮಾತ್ರಕ್ಕೆ ಅವು ಕಳಪೆ ಆಗಿರುವುದಿಲ್ಲ. ಲಕಲಕಿಸುವ ಬಂಗಾರದ ಅಂಗಡಿಗಳ ಜಾಹೀರಾತಿನ ಮೋಡಿಗೆ ಮರುಳಾಗಿ ಬಂಗಾರದ ಬೆಲೆಗಿಂತಲೂ ಹೆಚ್ಚು ಮಜೂರಿಗೆ ಬೆಲೆ ಕೊಡುವ ಬದಲು ಮನೆಯ ಸಮೀಪದ ಅಕ್ಕಸಾಲಿಗನಲ್ಲಿ ಮಾಡಿಸಿ, ನಿಮ್ಮ ಹಣವೂ ಉಳಿಯುವ ಜೊತೆ ಅವರ ಮಕ್ಕಳ ಭವಿಷ್ಯಕ್ಕೂ ಸಹಾಯ ಮಾಡಿದಂತಾಗುವುದು.
ಪ್ಯಾಕೆಟ್ ತುಂಬ ಗಾಳಿ ತುಂಬಿ ಕನಿಷ್ಟ ಒಂದು ಬಟಾಟೆಯೂ ಇಲ್ಲದ ಚಿಪ್ಸ್ ಬದಲು, ಪ್ಯಾಕೆಟ್ ತುಂಬ ಚಿಪ್ಸ್ ಇರುವ ಸ್ಥಳೀಯ ಅಂಗಡಿಯಿಂದ ಖರೀದಿಸಿ, ಜಾಹಿರಾತಿನಲ್ಲಿ ಬರುವ ರಾಸಾಯನಿಕಯುಕ್ತ ಕ್ರೀಮ್, ಸೋಪು, ಪಾನೀಯ, ಸೆಂಟುಗಳನ್ನು ಬಳಸುವ ಮುನ್ನ ಎಚ್ಚರವಹಿಸಿ. ನಮ್ಮ ಹಿರಿಯರ ಪೆಟ್ಟಿಗೆಯಲ್ಲಿ ಅನುಭವದ ಮಾತುಗಳಿರುತ್ತವೆ ಅವುಗಳನ್ನ ಆಲಿಸಿ. ನಿಮ್ಮ ಜೇಬುಗಳನ್ನ ಭದ್ರವಾಗಿರಿಸಿ. ಇಲ್ಲವಾದಲ್ಲಿ ಜೇಬಲ್ಲಿರುವ ಕಾಸಿನ ಜೊತೆ ನಿಮ್ಮ ಮನಸ್ಸಿನ ನೆಮ್ಮದಿಯೂ ಹಾಳಾದೀತು ಜೋಕೆ….ಎಚ್ಚರ ಗ್ರಾಹಕ ಎಚ್ಚರ…
-ಶರೋಣ್ ಶೆಟ್ಟಿ ಐಕಳ

