“ಪುಣ್ಯವಾಚಕ ಪದವಿಲ್ಲದ, ಋಜುವಲ್ಲದ ಸ್ವಚ್ಛಂದ ಭಾಷೆ -ಇಂಗ್ಲೀಷ್”

ಸ್ಯಾನ್ ಹೋಸೆ ಸಂಸ್ಕೃತ ಸಮ್ಮೇಳನದಲ್ಲಿ ಉಡುಪಿ ಶ್ರೀ ಪುತ್ತಿಗೆ ಶ್ರೀ

ಸ್ಯಾನ್ ಹೋಸೆ, ಕ್ಯಾಲಿಫೋರ್ನಿಯಾ, ಅಮೇರಿಕ, ನವೆಂಬರ್ ೧: ಸಿ-ಯು-ಟಿ ಕಟ್, ಪಿ-ಯು-ಟಿ ಪುಟ್,ಸ್ಯಾನ್ ಹೋಝೆ, ಸ್ಯಾನ್ ಜೋಸೆ ಇತ್ಯಾದಿ ಅಸಂಖ್ಯ ಅಸಮರ್ಥನೀಯ ಭ್ರಾಮಕ ಉಚ್ಚಾರಣೆಗಳ ಪದಪುಂಜಗಳಿಂದ ರಂಜಿತವಾದ, ತನ್ಮೂಲಕ ಜೀವನದಲ್ಲಿ ಅನಾರ್ಜವತೆಯನ್ನು ಹುರಿದುಂಬಿಸುವ, ತ್ರಿಕರಣಗಳ ತಾಕಲಾಟಗಳನ್ನು ಪಡಿಮೂಡಿಸುವ, ವೈ-ಓ-ಯು ಸೇರಿ ’ಯೂ’, ಏ-ಆರ್-ಈ ಸೇರಿ ಅರೆ ಎಂಬುದನ್ನು ’ಆರ್’ ಇತ್ಯಾದಿ ಉಚ್ಛರಿಸುವಂತಹ ಅನೇಕ ಮೂಢನಂಬಿಕೆಗಳಿಗೆ, ಅಸಂಗತಗಳಿಗೆ ಇಂಬು ನೀಡುವ, ಲಂಗು-ಲಗಾಮಿಲ್ಲದೆ, ಎಗ್ಗಿಲ್ಲದೆ ಸ್ವಚ್ಛಂದವಾಗಿ ಬೆಳೆಯುತ್ತಾ, ಹಬ್ಬುತ್ತಾ ಮುಂದೆ ತನ್ನ ಅಸ್ತಿತ್ತ್ವವನ್ನೇ,ಸ್ವಂತಿಕೆಯನ್ನೇ ಕಳಕೊಳ್ಳುವ ಫನ್ನಿ ಹಾಗೂ ಕಲೋಕ್ಯೆಯಲ್ ಆಗುವ ಭೀತಿಗೊಳಗಾಗಿರುವ, ಅನೇಕರಿಗೆ ಹೆಡ್ ವೈಟ್ ನ್ನು ಹೆಚ್ಚಿಸುವ, ಸಿನ್ ಎಂದು ಕೇವಲ ಪಾಪ ಪದವನ್ನು ಹೊಂದಿದ್ದು, ತತ್ ಪರ್ಯಾಯವಾಗಿ ಪುಣ್ಯವಾಚಕ ಪದರಹಿತವಾದ ಜೀವಚ್ಛವದಂತೆ ಇದ್ದೂ ಇಲ್ಲದಂತಿರುವವಾಕ್ ಮೊದಲಾದ ಸೈಲೆಂಟ್ ಪದಗಳಿಂದ ಭೂಯಿಷ್ಠವಾದ, ಧರ್ಮ, ಕರ್ಮ, ಸನ್ನಿಧಿ, ಗುರು ಮೊದಲಾದ ಮುಖ್ಯ ಪವಿತ್ರ ಪದಗಳನ್ನೆಲ್ಲಾ ಬೇರೆ ಭಾಷೆಗಳಿಂದ ಎರವಲು ಪಡೆದು ಮಾರುಕಟ್ಟೆ, ಮಾರ್ಕೆಟ್ ಇತ್ಯಾದಿ ಎಲ್ಲಾ ಭಾಷೆಗಳಿಂದಲೂ ಶಬ್ದಗಳನ್ನು ಕದ್ದು ತನ್ನದಾಗಿಸಿಕೊಂಡು ಚೋರಾವತಾರವೆಂದೆನಿಸಿದ, ಮೈದುನ, ನಾದಿನಿ ಮೊದಲಾದ ಮಾನವ ವಿಶೇಷ ಸಂಬಂಧಗಳಿಗೆ ವಿಶೇಷ ಪರಿಗಣನೆಯಿಲ್ಲದ ಒಂದು ಪುಟ್ಟ ಜನಾಂಗಕ್ಕೆ ಸಂಬಂಧ ಪಟ್ಟದ್ದೆಂದು ಅರ್ಥ ನೀಡುವ ಅಂಗ್ರೇಜಿ ಭಾಷೆಯನ್ನು ಎದುರಲ್ಲಿಟ್ಟುಕೊಂಡು ಪೂರ್ಣವಾಗಿ ಗಮನಿಸುತ್ತಾ,

IMG_1514

20151031_165245

ಶಬ್ದ ಅರ್ಥಗಳಿಗೆ ಸಹಜವಾದ ಔತ್ಪತ್ತಿಕ ಸಂಬಂಧವುಳ್ಳದ್ದೆಂದು ಗುರುತಿಸಿಲ್ಪಟ್ಟ, ಸ್ಪಷ್ಟ ಕ್ಲಿಷ್ಟ ಉಚ್ಚಾರಣೆಗಳ ಮೂಲಕ ಭಾವನಾ ಪರಿಶುದ್ಧತೆಯನ್ನು ಸಾಧಿಸುವ ಅತ್ಯಂತ ಸುಸಂಸ್ಕೃತ ಋಜು ಭಾಷೆಯಾದ ಚೌಕಟ್ಟುಬದ್ಧವಾದ ಅನಾದಿ, ವೈಜ್ಞಾನಿಕ ಭಾಷೆಯಾದ, ಸಮಸ್ತ ಪದಗಳ ಮೂಲಕ ಕಂಪ್ಯೂಟರ್ ಯಂತ್ರಕ್ಕೂ ಆಪ್ಯಾಯಮಾನವಾದ, ಸಂಸ್ಕೃತ, ಗಂಗಾ ಇತ್ಯಾದಿ ಸಂಸ್ಕಾರಯುಕ್ತ ಪದಗಳನ್ನು ಸ್ಯಾಂಸ್ಕೃಟ್, ಗ್ಯಾಂಜಸ್ ಇತ್ಯಾದಿ ಕುರೂಪೀಕರಿಸುವ ಅನಿವಾರ್ಯತೆ ಇಲ್ಲದ, ಏಕ ಭಾಷಾಧ್ಯಯನದಿಂದ ಜಗತ್ತಿನ ಸರ್ವ ಭಾಷಾಧ್ಯಯನವನ್ನು ಸುಲಭ ಸಾಧ್ಯಗೊಳಿಸುವ, ಜನರನ್ನು ಅಸ್ಪಷ್ಟತೆಯಿಂದ ಸ್ಪಷ್ಟತೆಗೆ ಒಯ್ಯುವ “ಸಂಸ್ಕೃತ ಭಾಷೆ”ಯನ್ನು ತುಲನೆ ಮಾಡಿದಾಗ ಭಾಷೆಗಳೆರಡರ ಬಗ್ಗೆ ಸ್ಪಷ್ಟ ಅಂತರ ಹಾಗೂ ಮೌಲ್ಯಗಳು ದೃಗ್ಗೋಚರವಾಗುತ್ತದೆ, ನಿಚ್ಛಳವಾಗುತ್ತದೆ ಎಂದು ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಭಾರತದ ’ಸಂಸ್ಕೃತ ಭಾರತಿ’ ಸಂಸ್ಥೆಯು ಅಮೇರಿಕದ ಸ್ಯಾನ್ ಹೋಸೆಯಲ್ಲಿಆಯೋಜಿಸಿದ ಬೃಹತ್ ಸಂಸ್ಕೃತ ಸಮ್ಮೇಳನದಲ್ಲಿ, ಸಂಸ್ಕೃತದ ’ಮಹಾಭಾರತ ಚಿತ್ರಮಾಲಿಕೆ’ ಪುಸ್ತಕವನ್ನು ಲೋಕಾರ್ಪಣೆ ಮಾಡುತ್ತಾ ಸರಳಶುದ್ಧ ಸಂಸ್ಕೃತದಲ್ಲಿ ನುಡಿದರು.

ಇತ್ತೀಚೆಗೆ ಕ್ಯಾಲಿಫೋರ್ನಿಯಾದ, ಕ್ಯೂಪರ್ಟಿನೋ ನಗರದ ವಿದ್ಯಾಲಯಗಳಲ್ಲಿ ಸಂಸ್ಕೃತವನ್ನೂ ಪಠ್ಯ ಭಾಷೆಯನ್ನಾಗಿ ಅಂಗೀಕರಿಸಿದನ್ನು ಅಭಿನಂದಿಸುತ್ತಾ ಅವರು, ಇಂದು ಆಸ್ಟ್ರೇಲಿಯಾ, ಇಂಗ್ಲೆಂಡ್ ಇತ್ಯಾದಿ ಅನೇಕ ದೇಶಗಳು ಸಂಸ್ಕೃತದ ಮಹತ್ತ್ವವನ್ನು ಗುರುತಿಸಿ ಅದರ ಪ್ರಸಾರಕ್ಕೆ ವಿಶೇಷ ಆಸ್ಥೆಯನ್ನು, ಕಾಳಜಿಯನ್ನು ಹೊಂದಿರುವುದನ್ನು ಭಾರತೀಯರು ಗುರುತಿಸುವ ಆವಶ್ಯಕತೆಯಿದೆ ಎಂದರು.

ವಿದ್ವಾನ್ ಶ್ರೀಪ್ರಸಾದ ಕೈಪ, ವೇದವಿದ್ವಾನ್ ಶ್ರೀ ನರೇಂದ್ರ ಕಪ್ರೆ, ಶ್ರೀ ಸತ್ಯನಾರಾಯಣ ಭಟ್ಟ ಇವರ ನೇತೃತ್ವದಲ್ಲಿ ಸಂಸ್ಕೃತ ಭಾರತಿ,ಕ್ಯಾಲಿಫೋರ್ನಿಯಾ ಶಾಖೆಯ ವಿಂಶತಿ ಉತ್ಸವದ ಪ್ರಯುಕ್ತ ಪ್ರಾರಂಭವಾದ ಸಂಸ್ಕೃತ ಸಮ್ಮೇಳನದಲ್ಲಿ ಪ್ಯಾಲೋ ಆಲ್ಟೊ, ಕ್ಯೂಪರ್ಟಿನೋ, ಎವರ್ಗ್ರೀನ್ ಹಾಗೂ ಫ್ರೀಮಾಂಟ್ ಶಾಖೆಗಳ ಬಾಲ ಕೇಂದ್ರದ ವಿದ್ಯಾರ್ಥಿಗಳಿಂದ ಹಾಗೂ ಸನ್ನಿವೇಲ್ ಪ್ರೌಢ ವಿದ್ಯಾರ್ಥಿಗಳಿಂದ ವಿವಿಧ ಪ್ರದರ್ಶನಾವಳಿಗಳು ನಡೆದವು. ವಿದ್ವಾನ್ ಶ್ರೀನಿವಾಸ ಕಡಬ ಅವರು ಕಾರ್ಯಕ್ರಮ ನಿರೂಪಿಸಿ, ಜ್ಯೋತಿ ಗೋವಿಂದ ರಾವ್ ಅವರುನಿರ್ವಹಿಸಿದರು.

 

By suddi9

Leave a Reply

Your email address will not be published. Required fields are marked *