ಬಂಟ್ವಾಳ: ಕಲ್ಲಡ್ಕದಲ್ಲಿ ನಡೆದ ಕಾಂಗ್ರೆಸ್ ಸಾಮರಸ್ಯ ಸಭೆಯ ಬಳಿಕ ಉಂಟಾದ ಹಿಂಸಾಚಾರ ಮತ್ತು ಕಳೆದ ಕೆಲ ದಿನಗಳ ಹಿಂದೆ ಬ್ರಹ್ಮರಕೂಟ್ಲುವಿನ ಟೋಲ್ ಪ್ಲಾಝಾದಲ್ಲಿ ನಡೆದ ಘರ್ಷಣೆಗೆ ಕಾಂಗ್ರೆಸ್ ಕಾರಣವೆನ್ನುವಂತೆ ಮಾಧ್ಯಮಗಳು ಬಿಂಬಿಸುತ್ತಿವೆ. ಹಿಂದೂ ಮುಸ್ಲಿಂ ಗಲಭೆ ಎನ್ನುವ ಟ್ರಂಪ್ ಕಾರ್ಡ್  ಬಳಸಿ ಎಲ್ಲಾ ಆರೋಪಗಳನ್ನು ಕಾಂಗ್ರೆಸ್ ಮೇಲೆ ಹೊರಿಸಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಳ್ಳುತ್ತಿವೆ. ಆದರೆ ಇಂತಹ ಗಲಭೆಗಳಿಗೂ ಕಾಂಗ್ರೆಸ್ಸಿಗೂ ಯಾವುದೇ ಸಂಬಂಧ ಇಲ್ಲ. ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಹರಿಕೃಷ್ಣ ಬಂಟ್ವಾಳ ಸ್ಪಷ್ಟ ಪಡಿಸಿದ್ದಾರೆ.
ಗುರುವಾರ ಸಂಜೆ ಬಿ.ಸಿರೋಡಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪೊಲೀಸ್ ಇಲಾಖೆಯ ವೈಫಲ್ಯವೇ ಇಂತಹ ಘರ್ಷಣೆಗಳಿಗೆ ಕಾರಣ ಹೊರತು ಕಾಂಗ್ರೆಸ್ ಅಲ್ಲ. ಕಾಂಗ್ರೆಸ್ ನ   ಒಬ್ಬ ಕಾರ್ಯಕರ್ತನಿಂದ ಆದ ತಪ್ಪಿಗೆ ಇಡೀ ಪಕ್ಷದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ತಪ್ಪಿಸ್ಥರನ್ನು ಪೊಲೀಸರು ಬಂಧಿಸಲಿ ಜೊತೆಗೆ ಗಲಭೆಗೆ ಕಾರಣ ಏನು ಎನ್ನುವುದನ್ನು ಪತ್ತೆ ಮಾಡಲಿ ಗಲಭೆಗೆ ಉಸ್ತುವಾರಿ ಸಚಿವರ ಹಸ್ತಕ್ಷೇಪವೂ ಇಲ್ಲ. ಗೂಂಡಾಗಿರಿ ಮಾಡುವವರನ್ನು, ಗಲಭೆಕೋರರನ್ನು ಕಾಂಗ್ರೆಸ್ ಎಂದೂ ಬೆಂಬಲಿಸುವುದಿಲ್ಲ ಎಂದ ಅವರು ಪೊಲೀಸ್ ಇಲಾಖೆಯ ಕರ್ತವ್ಯ ಲೋಪವನ್ನು ಟೀಕಿಸಿದರು.
ಯುದ್ದ ಇರುವುದು ಕಾಂಗ್ರೆಸ್  ಮತ್ತು ಬಿಜೆಪಿಯ ನಡುವೆ , ಈ ಪಕ್ಷಗಳ ಸಿದ್ದಾಂತದ ನಡುವೆ ಹೊರತು ಹಿಂದು ಮುಸ್ಲಿಮರ ಮಧ್ಯೆ ಅಲ್ಲ. ಆದರೆ ಬಿಜೆಪಿ, ಕಾಂಗ್ರೆಸ್ ನಡುವೆ ಪ್ರತೀ ಬಾರಿ ಗಲಭೆ ನಡೆದಾಗಲೂ ಹಿಂದು ಮುಸ್ಲಿಂ ಗಲಭೆ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಕೋಮುಗಲಭೆಗೆ ಪ್ರಚೋದನೆ ನೀಡುತ್ತಿರುವ ನಾಯಕರ ಹೇಳಿಕೆಗಳಿಗೆ , ಮಾಧ್ಯಮಗಳು ಹೆಚ್ಚಿನ ಮಹತ್ವ ನೀಡುತ್ತಿರುವುದು ಅಪಾಯಕಾರಿ ಎಂದ ಅವರು ಸುದ್ದಿಗೋಷ್ಟಿಯ ಉದ್ದಕ್ಕೂ ಮಾಧ್ಯಮಗಳನ್ನು ಟಾರ್ಗೆಟ್    ಮಾಡಿದರು. ಬ್ರಹ್ಮರಕೂಟ್ಲು ಪರಿಸರದಲ್ಲಿ ನಾಗರಿಕರಿಗಾಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಸಂವಿಧನಾತ್ಮಕವಾಗಿ ಬ್ರಹ್ಮರಕೂಟ್ಲುವಿನಲ್ಲಿ ಪ್ರತಿಭಟನೆ ಮಾಡಿದ್ದೇವೆ. ಈ ಹಿಂದೆ ಪಾಣೆಮಂಗಳೂರಿನಲ್ಲಿ 12 ವರ್ಷಗಳ ಕಾಲ ಟೋಲ್ ಬೂತ್ ಇದ್ದರೂ ಕಾಂಗ್ರೆಸ್ ಒಂದೇ ಒಂದು ದಿನ ಪ್ರತಿಭಟನೆ ಮಾಡಿಲ್ಲ. ನಮಗೂ ಗುತ್ತಿಗೆದಾರರಿಗೂ ಯಾವುದೇ ದ್ವೇಷ ಇಲ್ಲ ಎಂದ ಅವರು ಬ್ರಹ್ಮರಕೂಟ್ಲುವಿನಲ್ಲಿ ಆಗಿರುವ ಗಲಭೆಯ ಹಿನ್ನಲೆಯೇ ಬೇರೆ, ಇದರ ಹಿಂದಿನ ಸತ್ಯ ಜನರಿಗೆ ಗೊತ್ತಗಾಬೇಕು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಪ್ರಮುಖರಾದ ಮಾಯಿಲಪ್ಪ ಸಾಲ್ಯಾನ್, ಅಬ್ಬಾಸ್ಅಲಿ, ಪದ್ಮಶೇಖರ್ ಜೈನ್, ಸದಾಶಿವ ಬಂಗೇರಾ, ಸಂಜೀವ ಪೂಜಾರಿ, ವಸಂತಿ ಚಂದಪ್ಪ, ಲುಕ್ಮಾನ್, ಮಧುಸೂದನ್ ಶೆಣೈ, ಜನಾರ್ದನ ಚೆಂಡ್ತಿಮಾರ್, ಪ್ರಶಾಂತ್ ಕುಲಾಲ್, ಸದಾನಂದ ಹಾಜರಿದ್ದರು.

By suddi9

Leave a Reply

Your email address will not be published. Required fields are marked *