ಬಂಟ್ವಾಳ: ತಾಲೂಕಿನ ವಿವಿಧೆಡೆ ಖಾಸಗಿ ಜಮೀನಿನಲ್ಲಿ ಗ್ಯಾಸ್ ಪೈಪ್ಲೈನ್ಗಾಗಿ ಎಚ್ಪಿಸಿಎಲ್ ಸಂಸ್ಥೆ ಗುಂಡಿ ತೋಡಿದ ಮಣ್ಣು ಎರಡು ದಿನಗಳಿಂದ ಸುರಿಯುವ ಮಳೆಗೆ ಕೊಚ್ಚಿ ಹೋಗಿ ಕೃಷಿ ಭೂಮಿಗೆ ನುಗ್ಗಿದೆ.


ಕಾವಳ ಪಡೂರು ಗ್ರಾಮದ ಮದ್ವ ಎಂಬಲ್ಲಿ ವೀರಪ್ಪ ಗೌಡ ಎಂಬ ಕೃಷಿಕ ತನ್ನ 16 ಸೆಂಟ್ಸ್ ಜಮೀನನ್ನು ಗ್ಯಾಸ್ಪೈಪ್ಲೈನ್ಗಾಗಿ ಎಚ್ಪಿಸಿಎಲ್ ಸಂಸ್ಥೆಗೆ ಬಿಟ್ಟುಕೊಟ್ಟಿದ್ದರು. ಈ ಜಮೀನಿನಲ್ಲಿದ್ದ ಗೇರು ಕೃಷಿಯನ್ನು ಸಮತಟ್ಟು ಗೊಳಿಸಿ ಸಂಸ್ಥೆ ಗುಂಡಿ ತೋಡಿ ಪೈಪ್ಲೈನ್ ಅಳವಡಿಸಿತ್ತು. ಅದರ ಪಕ್ಕವೇ ಒಂದು ಎಕರೆ ಜಮೀನಿನಲ್ಲಿ ವೀರಪ್ಪ ಗೌಡ ಅಡಿಕೆ ಹಾಗೂ ತೆಂಗಿನ ತೋಟ ನಿರ್ಮಿಸಲು ಗುಂಡಿ ತೆಗೆದು ಗಿಡಗಳನ್ನು ನೆಟ್ಟಿದ್ದರು. ಆದರೆ ಕಳೆದ ಎರಡು ದಿನಗಳಿಂದ ಸಂಜೆಯ ಬಳಿಕ ಸುರಿದ ಮಳೆಗೆ ಹೊಂಡ ಮುಚ್ಚಿದ ಮಣ್ಣು ಸವಕಳಿಯಾಗಿ ಇಳಿಜಾರಿನಲ್ಲಿದ್ದ ತೋಟಕ್ಕೆ ನುಗ್ಗಿ ಹೊಂಡ ಹಾಗೂ ಗಿಡಗಳು ಸಂಪೂರ್ಣ ಮುಚ್ಚಿ ಹೋಗಿದೆ.
ಪ್ರತಿಭಟನೆಯ ಎಚ್ಚರಿಕೆ:
ಗ್ಯಾಸ್ಪೈಪ್ಲೈನ್ಗಾಗಿ ಎಚ್ಪಿಸಿಎಲ್ ಸಂಸ್ಥೆಗೆ ಜಮೀನು ಬಿಟ್ಟುಕೊಟ್ಟ ಪರಿಣಾಮ ಕೃಷಿಕರೇ ತೊಂದರೆ ಪಡುವಂತಾಗಿದೆ. ಜಮೀನು ಕೊಟ್ಟ ತಪ್ಪಿಗೆ ಅಪಾರ ಕೃಷಿ ನಾಶವಾಗಿದೆ. ಸಂಬಂಧಪಟ್ಟ ರೈತರಿಗೆ ಒಂದು ವಾರದೊಳಗಾಗಿ ಎಚ್ಪಿಸಿಎಲ್ ಸಂಸ್ಥೆ ನಷ್ಟ ಪರಿಹಾರ ನೀಡಬೇಕು, ತಪ್ಪಿದ್ದಲ್ಲಿ ಸಂಸ್ಥೆ ಕಾಮಾಗಾರಿ ನಡೆಸುವ ಸ್ಥಳದಲ್ಲಿ ಪ್ರತಿಭಟನೆ ನಡೆಸುವುದಾಗಿ ಜಿ.ಪಂ.ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರಾ ಎಚ್ಚರಿಸಿದ್ದಾರೆ.
