ಬಂಟ್ವಾಳ: ಕಳೆದ ಮೂರು ದಿನಗಳಿಂದ ವಗ್ಗ ಪರಿಸರದಲ್ಲಿ ಬಿಎಸ್ಎನ್ಎಲ್ ದೂರ ಸಂಪರ್ಕ ಕೈಕೊಟ್ಟ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ವಗ್ಗ ದೂರವಾಣಿ ವಿನಿಮಯ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಘಟನೆ ಬುಧವಾರ ನಡೆಯಿತು.

ಮೂರು ದಿನಗಳಿಂದ ದೂರಸಂಪರ್ಕ ವ್ಯವಸ್ಥೆಯಲ್ಲಿನ ದೋಷದಿಂದಾಗಿ ವಗ್ಗ ಪರಿಸರದಲ್ಲಿ ಬ್ಯಾಂಕಿಗ್ ವ್ಯವಹಾರವೂ ಸ್ಥಗಿತಗೊಂಡಿದ್ದವು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ವ್ಯವಹಾರಗಳು ನಡೆಯಲು ಅಂತರ್ಜಾಲ ಅಗತ್ಯವಾಗಿದ್ದು ದೂರಸಂಪರ್ಕದಲ್ಲಿನ ವ್ಯತ್ಯಾಸದಿಂದಾಗಿ ಬ್ಯಾಂಕ್ ಗ್ರಾಹಕರು ತೊಂದರೆ ಪಡ ಬೇಕಾಯಿತು. ವಿವಿಧ ಪಿಂಚಣಿ ಯೋಜನೆಗಳನ್ನು ಪಡೆಯಲು ಬ್ಯಾಂಕ್ ಗೆ ಬರುತ್ತಿದ್ದ ಗ್ರಾಹಕರು ಈ ಸಮಸ್ಯೆಯಿಂದಾಗಿ ಪಿಂಚಣಿ ಪಡೆದುಕೊಳ್ಳಲಾಗದೆ ವಾಪಾಸ್ಸಾಗುತ್ತಿದ್ದರು. ಮೂರು ದಿನ ಕಳೆದರು ದೂರ ಸಂಪರ್ಕ ವ್ಯವಸ್ಥೆ ದುರಸ್ಥಿ ಆಗದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳೀಯ ಮುಖಂಡ ಜಿನರಾಜ ಆರಿಗ ಅವರ ನೇತೃತ್ವದಲ್ಲಿ ವಗ್ಗ ದೂರವಾಣಿ ವಿನಿಮಯ ಕೇಂದ್ರಕ್ಕೆ ಮುತ್ತಿಗೆ ಹಾಕಿದರು. ಕಳೆದ ಭಾನುವಾರ ಅಪ್ಪಳಿಸಿದ ಸಿಡಿಲಿಗೆ ಓಎಫ್ಸಿ ತುಂಡಾಗಿದ್ದು ಸಮಸ್ಯೆಗೆ ಕಾರಣ ಈ ಬಗ್ಗೆ ಮೇಲಾಧಿಕಾರಿಗಳಿಗೆ ಗಮಕ್ಕೆ ತಂದು ತುರ್ತು ದುರಸ್ತಿ ಪಡಿಸುವುದಾಗಿ ದೂರವಾಣಿ ವಿನಿಮಯ ಕೇಂದ್ರದ ಅಧಿಕಾರಿ ತಿಳಿಸಿದರು.
