ಮುಂಬಯಿ: ಬಂಟರ ಸಂಘ ಮುಂಬಯಿ ವಸಾಯಿ-ಡಹಾಣು ಪ್ರಾದೇಶಿಕ ಸಮಿತಿಯ ವತಿಯಿಂದ ಹಳದಿ ಕುಂಕುಮ, ದಾಂಡಿಯ, ಭಜನೆ, ದಸರಾ ಸಂಭ್ರಮಾಚರಣೆ ಅ.16ರಂದು ವಸಾಯಿ- ನಾಲಾಸೊಪಾರಾ ಲಿಂಕ್ ರೋಡ್ ನ ಫಯರ್ ಬ್ರಿಗೇಡ್ ಕಚೇರಿ ಮುಂಭಾಗದಲ್ಲಿರುವ ರೀಜೆನ್ಸಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ್ ಶೆಟ್ಟಿ ಮಾತನಾಡುತ್ತಾ, ಈ ಪ್ರಾದೇಶಿಕ ಸಮಿತಿಯ ಎಲ್ಲಾ ಕಾರ್ಯಕ್ರಮಗಳಲ್ಲೂ ಮಹಿಳೆಯರು ಹೆಚ್ಚು ಸಕ್ರಿಯರಾಗಿರುತ್ತಾರೆ. ತುಳು ನಾಡಿನ ಸಂಸ್ಕೃತಿಯನ್ನು ನಮ್ಮವರು ಉಳಿಸುವುದರೊಂದಿಗೆ ಮರಾಠಿ ಮಣ್ಣಿನ ಸಂಸ್ಕೃತಿ ಮತ್ತು ಆಚರಣೆಗಳನ್ನು ಬೆಳೆಸಿಕೊಂಡಿದ್ದೇವೆ. ಹಳದಿ ಮತ್ತು ಕುಂಕುಮಕ್ಕೆ ವಿಶಿಷ್ಟವಾದ ಶಕ್ತಿ ಇದೆ. ಹಳದಿ ಆರೋಗ್ಯಕ್ಕೆ ಒಳಿತಾದರೆ ಕುಂಕುಮ ಮಹಿಳೆಯರಿಗೆ ಶೋಭಿತ. ಹಿರಿಯರು ಬೆಳೆಸಿಕೊಂಡಿರುವಂತಹ ಕುಟುಂಬದ ಸಂಸ್ಕಾರವನ್ನು ಉಳಿಸಬೇಕಾದಲ್ಲಿ ನಮ್ಮ ಯುವಕ- ಯುವತಿಯರು ಸಂಘ ಸಂಸ್ಥೆಗಳಲ್ಲಿ ಹೆಚ್ಚು ಸಕ್ರಿರಾಗಬೇಕಾಗಿದೆ ಎಂದರು. ಈ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿಯವರ ವಿಚಾರಗಳು, ಸೇವಾ ಕಾರ್ಯಗಳು ತಳಮಟ್ಟದ ಬಂಧುಗಳ ಸೇವೆಯ ಬಗ್ಗೆ ಅವರ ಮನೋಭಾವನೆಗಳನ್ನು ಹತ್ತಿರದಲ್ಲಿ ಅರಿತಿದ್ದೇವೆ. ಮಹಿಳಾ ವಿಭಾಗ ಮಹಿಳೆಯನ್ನು ಒಗ್ಗೂಡಿಸಿ ಅವರ ಆಶೋತ್ತರಗಳಿಗೆ ಸ್ಪಂದಿಸುವ ಇನ್ನಷ್ಟು ಸೇವಾ ಕಾರ್ಯಗಳು ನಡೆಯಲಿ ಎಂದರು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಕೆ.ಶೆಟ್ಟಿ ಮಾತನಾಡುತ್ತಾ, ಬಂಟರ ಸಂಘ ಈ ಪ್ರಾದೇಶಿಕ ಸಮಿತಿಯ ಮೇಲೆ ವಿಶೇಷ ಒಲವು ನೀಡಿದೆ. ನಮ್ಮ ಯೋಚನೆಗಳಿಗೆ ಸಂಘ ಸ್ಪಂದಿಸುತ್ತಾ ಬಂದಿದೆ. ಮಹಿಳಾ ವಿಭಾಗ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ವೇದಿಕೆಯಲ್ಲಿ ಲತಾ ವಿ.ಶೆಟ್ಟಿ, ಕರ್ನಿರೆ ಶ್ರೀಧರ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಪಿ.ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಕಾಪು ಮೋಹನ್ ವಿ. ಶೆಟ್ಟಿ, ಕಾರ್ಯದರ್ಶಿ ಕಣಂಜಾರು ಪ್ರವೀಣ್ ವಿ.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಅರುಣ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶರ್ಮಿಳಾ ಎಸ್. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಜಯ ಎ.ಶೆಟ್ಟಿ,ಕಾರ್ಯದರ್ಶಿ ಉಮಾ ಸತೀಶ್ ಶೆಟ್ಟಿ, ಕೋಶಾಧಿಕಾರಿ ರೇಖಾ ಶೆಟ್ಟಿ, ಜತೆ ಕಾರ್ಯದರ್ಶಿ ಲತಾ ಆರ್. ಶೆಟ್ಟಿ, ಜತೆ ಕೋಶಾಧಿಕಾರಿ ಸಂಧ್ಯಾ ಶೆಟ್ಟಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶರ್ಮಿಳಾ ಎಸ್.ಶೆಟ್ಟಿ ಸ್ವಾಗತಿಸಿದರು. ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಮಂಜುಳಾ ಆನಂದ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರೆ ಉಮಾ ಎಸ್. ಶೆಟ್ಟಿ ಆಭಾರ ಮನ್ನಿಸಿದರು. ಭಜನೆ, ದಾಂಡಿಯಾಗಳೊಂದಿಗೆ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್




