ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಹಳೆ ಸೇತುವೆ ಸಮೀಪದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆಗೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಅಧಿಕಾರಿಗಳ ತಂಡವು ಶನಿವಾರ ಪೊಲೀಸರೊಂದಿಗೆ ದಿಢೀರ್ ದಾಳಿ ನಡೆಸಿ ಒಂದು ಜೆಸಿಬಿ ಸಹಿತ ನಾಲ್ಕು ಟಿಪ್ಪರ್ ವಶಪಡಿಸಿಕೊಂಡಿದ್ದಾರೆ.
ಈ ಹಿಂದೆಯೂ ದಾಳಿ ನಡೆಸಿ ದೋಣಿ ಸಹಿತ ಹಲವು ಟಿಪ್ಪರ್ ವಶಪಡಿಸಿಕೊಂಡಿದ್ದರೂ, ಮತ್ತೆ ನಿಯಮ ಮೀರಿ ಸೇತುವೆ ಬದಿಯಲ್ಲೇ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯರಿಂದ ವ್ಯಾಪಕ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿರುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಆರೋಪಿಗಳು ಪರಾರಿಯಾಗಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಬಿ.ಕೆ.ಮೂರ್ತಿ , ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ, ಎ.ಪಿ.ಭಟ್, ಗ್ರಾಮಕರಣಿಕರಾದ ಜನಾರ್ದನ, ಕುಮಾರ್, ಶಿವಪ್ಪ, ಮಲ್ಲೇಶ, ಸುಂದರ, ನಗರ ಠಾಣಾಧಿಕಾರಿ ನಂದಕುಮಾರ್ ಮತ್ತಿತರರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
