ಬಂಟ್ವಾಳ: ಸಮಾಜದಲ್ಲಿ ಸಂವಹನದ ಪ್ರಬಲ ಕೊಂಡಿಯಾಗಿರುವ ತನ್ನ ಮಾತೃ ಭಾಷೆ ಜೊತೆಗೆ ಇತರ ಸಹೋದರ ಭಾಷೆಗಳನ್ನು ಕೂಡಾ ಪ್ರತಿಯೊಬ್ಬರೂ ಸಮರ್ಪಕವಾಗಿ ಅರಿತುಕೊಂಡಾಗ ಪರಸ್ಪರ ಸಾಮರಸ್ಯ ಉಂಟಾಗಿ ಕಂದಕ ದೂರವಾಗುತ್ತದೆ. ಇದಕ್ಕಾಗಿ ಮಕ್ಕಳಿಗೆ ಬಾಲ್ಯದಲ್ಲಿ ಈ ಹಿಂದಿನ ಮಾದರಿಯಲ್ಲೇ ಎಲ್ಲರೊಂದಿಗೆ ಬೆರೆಯುವ ಬಹುಭಾಷೆಯ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕು ಎಂದು ಬಿ.ಸಿ.ರೋಡ್ನ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಶನಿವಾರ ನಡೆದ ‘ಬ್ಯಾರಿ ಭಾಷಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಭಾಷೆಯ ಬಗ್ಗೆ ಕೀಳರಿಮೆ ಸಲ್ಲದು ಎಂದು ಹೇಳಿದ ಅವರು ಜಿಲ್ಲೆಯಲ್ಲಿ ಸೊಗಸಾಗಿರುವ ಬ್ಯಾರಿ ಭಾಷೆ ಜೊತೆಗೆ ಇತರ ಭಾಷೆಯನ್ನು ಗೌರವಿಸಬೇಕು. ಆಂಗ್ಲ ಭಾಷಾ ವ್ಯಾಮೋಹದಲ್ಲಿ ನಮ್ಮ ನೆಲದ ಭಾಷೆ ಮತ್ತು ರಾಷ್ಟ್ರವನ್ನು ಕಡೆಗಣಿಸುವುದು ಎಂದಿಗೂ ಸರಿಯಲ್ಲ. ನಮ್ಮ ಭಾಷೆ ನಶಿಸಿದರೆ ನೆಲದ ಸಂಸ್ಕೃತಿಯೂ ನಶಿಸುತ್ತದೆ ಎಂಬ ವಾಸ್ತವವನ್ನು ಅರಿಯಬೇಕು ಎಂದರು.
ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಅಬ್ದುಲ್ ಲತೀಫ್ ನೇರಳಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತುಳು ಮತ್ತು ಯಕ್ಷಗಾನ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಅಶೋಕ್ ಶೆಟ್ಟಿ ಸರಪಾಡಿ ಮಾತನಾಡಿ, ಎಲ್ಲಾ ಜಾತಿ, ಭಾಷೆ, ಧರ್ಮಗಳ ಜನರು ಪರಸ್ಪರ ಪ್ರೀತಿಯಿಂದ ಬದುಕುವುದು ತುಳುನಾಡಿನ ಹಿರಿಮೆಯಾಗಿದೆ ಎಂದರು.
ಬಂಟ್ವಾಳ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಬಂಟ್ವಾಳ ಬ್ಯಾರಿ ಫೌಂಡೇಶನ್ ಅಧ್ಯಕ್ಷ ಪಿ.ಎ. ರಹೀಂ, ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ. ಶ್ರೀಯಾನ್ ರಾಯಿ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವಕರ್ಮ ಶುಭ ಹಾರೈಸಿದರು.
ಜಿಲ್ಲಾ ದಫ್ ಎಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
