ಬಂಟ್ವಾಳ: ಆರು ವರ್ಷದ ಬಾಲಕನೋರ್ವ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದಾನೆ. ಹುಟ್ಟಿನಿಂದಲೇ ಹೃದಯದ ಕಾಯಿಲೆಗೆ ತುತ್ತಾದ ಬಾಲಕನಿಗೆ ಈಗ ರೋಗ ಉಲ್ಭಣಿಸಿದ್ದು ತಕ್ಷಣ ಚಿಕಿತ್ಸೆ ನೀಡುವಂತೆ ವೈದ್ಯರು ಸೂಚಿಸಿದ್ದಾರೆ.
ಮೂಲತಃ ಸಜೀಪಮುನ್ನೂರು ಗ್ರಾಮದವರಾದ ಪ್ರಸ್ತುತ ಅಮ್ಟಾಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುರಿಯಾಳ ಗ್ರಾಮದ ಮೂವದಲ್ಲಿ ವಾಸಿಸುತ್ತಿರುವ ಪದ್ಮನಾಭ ಪೂಜಾರಿ ಹಾಗೂ ಕುಶಲ ದಂಪತಿಗಳ ಮಗ ವರ್ಷಿತ್ (6) ಹೃದಯರೋಗದಿಂದ ಬಳಲುತ್ತಿರುವ ಬಾಲಕನಾಗಿದ್ದಾನೆ.
ಪದ್ಮನಾಭ ಪೂಜಾರಿಯವರದ್ದು ಬಡ ಕುಟುಂಬ. ತಾನು ಕೂಲಿ ಕೆಲಸ ನಿರ್ವಹಿಸುತ್ತಿದ್ದರೆ ಪತ್ನಿ ಕುಶಲ ಗೃಹಿಣಿ. ಇವರಿಗೆ ಮೂರು ಮಂದಿ ಮಕ್ಕಳು. ವರ್ಷಿತ್ ಮೊದಲಿನವನಾದರೆ ಅವನ ಬಳಿಕ ಇನ್ನಿಬ್ಬರು ಮಕ್ಕಳಿದ್ದಾರೆ. ಹುಟ್ಟಿನಿಂದಲೇ ವರ್ಷಿತ್ ಹೃದಯ ಸಂಬಂಧಿ ರೋಗಕ್ಕೆ ತುತ್ತಾಗಿದ್ದು ಬಡ ಕುಟುಂಬದ ಪೋಷಕರಿಗೆ ಆತನಿಗೆ ಈವರೆಗೆ ಚಿಕಿತ್ಸೆ ನಿಡಲು ಸಾಧ್ಯವಾಗಿರಲಿಲ್ಲ. ಕಾಯಿಲೆಯಿಂದಾಗಿ ಆತನನ್ನು ಶಾಲೆಗೆ ಸೇರಿಸಲೂ ಸಾಧ್ಯವಾಗಿಲ್ಲ. ಇದೀಗ ರೋಗ ಉಲ್ಭಣಿಸಿದ್ದು ತಕ್ಷಣ ಚಿಕಿತ್ಸೆ ಕೊಡಿಸುವಂತೆ ಬೆಂಗಳೂರಿನ ನಾರಾಯಣ ಹೃದಯಾಲಯದ ವೈದ್ಯರು ತಿಳಿಸಿದ್ದಾರೆ. ಕೂಲಿ ಕೆಲಸದಿಂದ ಬರುವ ಆದಾಯದಿಂದ ಒಪ್ಪೊತ್ತಿನ ಊಟಕ್ಕೂ ತೊಂದರೆ ಪಡುತ್ತಿರುವ ಪದ್ಮನಾಭ ಪೂಜಾರಿಯವರು ಮಗನಿಗೆ ಚಿಕಿತ್ಸೆ ಕೊಡಿಸಲು ದಾನಿಗಳ ನೆರವು ಎದುರು ನೋಡುತ್ತಿದ್ದಾರೆ. ಬಾಲಕನ ಚಿಕಿತ್ಸೆಗೆ ಧನ ಸಹಾಯ ಮಾಡಲಿಚ್ಚಿಸುವ ಮಹನೀಯರು ಕೆನರಾ ಬ್ಯಾಂಕ್ ಸೊರ್ನಾಡು ಶಾಖೆಯ ಖಾತೆ ಸಂಖ್ಯೆ 5267101001945ಕ್ಕೆ ಜಮಾ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.
