ಬಂಟ್ವಾಳ: ಎತ್ತಿನ ಹೊಳೆಯ ವಿಚಾರವಾಗಿ ಸರ್ಕಾರ ಸುಳ್ಳುಭರವಸೆಗಳನ್ನು ನೀಡುತ್ತಿದ್ದು, ಕರ್ನಾಟಕ ಜನತಾ ಪಕ್ಷವು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ಎತ್ತಿನ ಹೊಳೆಯ ಕುರಿತಾಗಿ ಸತ್ಯ ವನ್ನು ಮನದಟ್ಟು ಮಾಡುವುದಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್ ಹೇಳಿದ್ದಾರೆ.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಎತ್ತಿನ ಹೊಳೆ ಯೋಜನೆ ಒಂದು ಚೆಂಬು ಯೋಜನೆಯಾಗಿದ್ದು, ಇದರ ವಿರುದ್ದ ಶನಿವಾರ ರಾಜ್ಯ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ತಿಳಿಸಿದರು. ಕೋಲಾರ ಜಿಲ್ಲೆಯಲ್ಲಿ ಒಂದು ಕಾಳದಲ್ಲಿ 840 ಕೆರೆಗಳಿದ್ದವು, ದ.ಕ.ಜಿಲ್ಲೆಗೆ ವಂಚನೆ ಮಾಡಿ ಎತ್ತಿನ ಹೊಳೆ ಎಂಬ ಅವೈಜ್ಞಾನಿಕ ಯೋಜನೆ ಜಾರಿಗೊಳಿಸುವುದಕ್ಕಿಂತ, ಆ ಕೆರೆಗಳನ್ನು ಒತ್ತುವರಿ ಮಾಡುವುದು ಒಳ್ಳೆಯದು ಎಂದವರು ಸಲಹೆ ನೀಡಿದರು. ಈ ಯೋಜನೆ ನೇತ್ರಾವತಿ ಹಾಗೂ ಕುಮಾರಧಾರ ನದಿಯನ್ನು ಬರಿದು ಮಾಡಿ ಹಣಗಳಿಸುವ ದಂಧೆ ಎಂದು ಆರೋಪಿಸಿದ ಅವರು, ನರೇಂದ್ರ ಮೋದಿಯಿಂದ ಹಿಡಿದು ಪ್ರಹ್ಲಾದ ಜೋಷಿಯವರೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ತೊಡಗಿ ಸರ್ಕಾರದ ಎಲ್ಲಾ ಮಂತ್ರಿಗಳೂ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದ ಅವರು, ಇವರೆಲ್ಲರ ಮೋಸದಾಟವನ್ನು ಕೆಜೆಪಿ ಬಹಿರಂಗಪಡಿಸಲಿದೆ ಎಂದರು.
ಮಂಜುನಾಥನ ಮೇಲಾಣೆ..
1577 ಪುಟಗಳ ದಾಖಲೆಯೊಂದಿಗೆ ಎತ್ತಿನ ಹೊಳೆ ಯೋಜನೆ ವಿರುದ್ದ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡುವುದಾಗಿ ತಿಳಿಸಿದ ಅವರು, ತನ್ನ ಆರಾಧ್ಯ ದೈವ ಮಂಜುನಾಥ ಸ್ವಾಮಿಯ ಮೇಲಾಣೆಯಾಗಿಯೂ ನನ್ನ ಪ್ರಾಣ ಹೋದರೂ ಯೋಜನೆಯನ್ನು ಮಾಡಲುಬಿಡುವುದಿಲ್ಲ ಎಂದರು. ಎತ್ತಿನ ಹೊಳೆಯ ಪರವಾಗಿ ಮಾತನಾಡುವವರಿಗೆಲ್ಲ ಹಣದ ಪಾಲು ಹಂಚಲಾಗಿದೆಯೋ ಎಂಬ ಅನುಮಾನ ಕಾಡುತ್ತಿದೆ ಎಂದ ಅವರು, ಕೇಂದ್ರಮಂತ್ರಿ ಸದಾನಂದ ಗೌಡರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಎತ್ತಿನ ಹೊಳೆಯನ್ನು ಬೆಂಬಲಿಸಿದ್ದರೆ, ವೀರಪ್ಪ ಮೊಯೊಲಿಯವರು ಮುಂದಿನ ಚುನಾವಣೆಯ ಉದ್ದೇಶದಿಂದ ಚಿಕ್ಕಬಳ್ಳಾಪುರದ ಜನತೆಯನ್ನು ಏಮಾರಿಸಲು ಹೊರಟಿದ್ದಾರೆ ಎಂದರು.
ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕೆಜೆಪಿ ಎಲ್ಲಾ ಸ್ಥಾನಗಳಲ್ಲಿಯೂ ಸ್ಪರ್ಧಿಸುವುದಾಗಿ ತಿಳಿಸಿದ ಅವರು, ಯಡಿಯೂರಪ್ಪ ಅವರು ಕೆಜೆಪಿ ಯಲ್ಲಿ ನಡೆಸಿದ ಕೆಲ ಗೊಂದಲಗಳಿಂದ ಕೆಜೆಪಿ ಗೆ ಲಾಭವಾಗಿದ್ದು, ಅದಕ್ಕಾಗಿ ಅವರಿಗೆ ಋಣಿಯಾಗಿರುವುದಾಗಿ ತಿಳಿಸಿದರು. ದ.ಕ.ಜಿಲ್ಲೆಯಲ್ಲೂ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಯುವಕರ ಪಡೆಯನ್ನು ಕಟ್ಟಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಯುವಘಟಕದ ಕಾರ್ಯದರ್ಶಿ ಚೇತನ್ ಕುಮಾರ್, ದ.ಕ.ಜಿಲ್ಲಾಧ್ಯಕ್ಷ ಗೋವಿಂದರಾಜ ನಾಯಕ್, ಸಂಚಾಲಕ ಅಶೋಕ್ ಜಿ, ಜಿಲ್ಲಾ ಲ್ಪಸಂಖ್ಯಾತ ಘಟಕದ ಅಧ್ಯಕ್ಷ ದೀಪಕ್ ರಾಜ್ ಕುವೆಲ್ಲೋ ಮೊದಲಾದವರು ಉಪಸ್ಥಿತರಿದ್ದರು.
