ಪಾಟ್ನಾ: ಬಿಹಾರ ಚುನಾವಣೆಗೆ ದಿನ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಸಮಾವೇಶಗಳು ಜೋರಾಗಿ ನಡೆಯುತ್ತಿವೆ. ಇಂದು ಅಲ್ಲಿನ ಪಶ್ಚಿಮ ಚಂಪರನ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುವವರಿದ್ದರು.
ಕಾರ್ಯಕ್ರಮಕ್ಕೆ ಸಭಾಂಗಣಕ್ಕೆ ಪ್ರವೇಶಿಸುವ ಮುನ್ನಾ ವ್ಯಕ್ತಿಯೊಬ್ಬನ ಬಳಿ ಏರ್ ಗನ್ ಪತ್ತೆಯಾಗಿ ಕೆಲವು ಕ್ಷಣಗಳ ಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.
“ಏರ್ ಗನ್ ಹೊಂದಿದ್ದ ಗಡ್ಡದಾರಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆತನ ಚೀಲ ಮತ್ತು ಏರ್ ಗನ್ ವಶಕ್ಕೆ ಪಡೆಯಲಾಗಿದೆ” ಎಂದು ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಭಾಷಣ ಮಾಡಲಿದ್ದ ಕಾರ್ಯಕ್ರಮದ ಸಭಾಂಗಣಕ್ಕೆ ವ್ಯಕ್ತಿಯೊಬ್ಬ ಏರ್ ಗನ್ ಹಿಡಿದುಕೊಂಡು ಪ್ರವೇಶಿಸಿದುದು ಪತ್ತೆಯಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಆಗಸ್ಟ್ 30ರಂದು ಕಾಂಗ್ರೆಸ್, ಜೆಡಿಯು, ಆರ್ ಜೆ ಡಿ ಮೈತ್ರಿಕೂಟದ ಘೋಷಣೆಯಾದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬಹುದೊಡ್ಡ ಸಮಾವೇಶ ಆಯೋಜಿಸಿದೆ.
