ಪುತ್ತೂರು: ಎತ್ತಿನಹೊಳೆ ನೇತ್ರಾವತಿ ನದಿ ತಿರುವು ಯೋಜನೆಯ ವಿರುದ್ಧ ದಕ್ಷಿಣ ಕನ್ನಡದ ಜನತೆ ಒಟ್ಟಾಗುವುದಿಲ್ಲ ಎಂಬ ಮಾತನ್ನು ಇಂದು ಅಕ್ಷರಶಃ ಶುಳ್ಳಾಗಿಸಿದ್ದಾರೆ. ಈ ಯೋಜನೆಯ ವಿರುದ್ದ ಉಪ್ಪಿನಂಗಡಿಯಲ್ಲಿ ಕರೆಯಲಾಗಿದ್ದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಜೈಲ್ ಭರೋ ಪ್ರತಿಭಟನೆಗೆ ಸಾಗರೋಪಾದಿಯಲ್ಲಿ ಪ್ರತಿಭಟನಾಕಾರರು ಭಾಗವಹಿಸಿದ್ದರು.
ಸ್ವಾಮೀಜಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತಾಡಿ ಯಾವುದೇ ಕಾರಣಕ್ಕೂ ನೇತ್ರಾವತಿ ನದಿ ತಿರುವು ಮಾಡಲು ಬಿಡುವುದಿಲ್ಲ ಎಂದು ಗುಡುಗಿದರು. ಪ್ರಕೃತಿಗೆ ವಿರುದ್ಧವಾಗಿ ನಡೆಯುವ ಯಾವ ಯೋಜನೆಗಳೂ ಯಶಸ್ವಿಯಾಗಲು ಸಾಧ್ಯವಿಲ್ಲ. ಅದಕ್ಕೆ ನಾವು ಅನುಮತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಸರಕಾರವನ್ನು ಎಚ್ಚರಿಸಿದರು.
ಹೋರಾಟದಲ್ಲಿ ಭಾಗವಹಿಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪ್ರಮುಖರನ್ನು ಪೊಲೀಸರು ಬಂಧಿಸಿ ಅಲ್ಲಿಯೇ ಬಿಡುಗಡೆಗೊಳಿಸಿದರು. ಒಡಿಯೂರು ಶ್ರೀಗಳು, ವಜ್ರದೇಹಿ, ಮಾಣಿಲ ಶ್ರೀಗಳು ಬಂಧನಕ್ಕೊಳಗಾದರು. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವಸಂತ ಬಂಗೇರ ಬಂಧನ ಸತ್ರಕ್ಕೂ ಮೊದಲೇ ನಿರ್ಗಮಿಸಿದ್ದರು.
ಇಂದಿನ ಈ ಹೊರಾಟಕ್ಕೆ ತುಳು ಚಿತ್ರರಂಗದ ಕೆಲವರು ಪಾಲ್ಗೊಳ್ಳುವ ಮೂಲಕ ಎತ್ತಿನಹೊಳೆ ಹೋರಾಟಕ್ಕೆ ತುಳುತಾರಾಮೇಳವೂ ಮಿಳಿತವಾಗಿತ್ತು. ನಿರ್ದೇಶಕ ವಿಜಯಕುಮಾರ ಕೊಡಿಯಾಲ್ ಬೈಲ್, ನಟ ಅಜರ್ುನ್ ಕಾಪಿಕಾಡ್, ರೂಪೇಶ್, ಅನ್ವಿತಾ ರಾವ್ ಸಹಿತ ಐಕ್ರೀಂ ಚಿತ್ರ ತಂಡ ಈ ಹೋರಾಟದಲ್ಲಿ ಪಾಲ್ಗೊಂಡು ಹೆದ್ದಾರಿ ತಡೆಯಲ್ಲೂ ಸಕ್ರಿಯವಾಗಿತ್ತು.
ಹೋರಾಟಗಾರರನ್ನು ಬಂಧಿಸಲು ಪೊಲೀಸರು ಪರದಾಡುವಂತಾಯಿತು. ಸುಮಾರು ಒಂದು ಸಾವಿರ ಜನರ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ಹೆದ್ದಾರಿ ತಡೆಗೆ ಬಂದ ಜನಸಾಗರವನ್ನು ನಿಭಾಯಿಸುವುದು ಕಷ್ಟವಾಯಿತು.
ಸಂಸದ ನಳಿನ್ ಕುಮಾರ್ ಕಟೀಲು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಬೆಳ್ತಂಗಡಿ ಶಾಸಕ ವಸಂತ ಬಂಗೇರ ನೇತ್ರಾವತಿ ನದಿ ತಿರುವು ವಿರೋಧಿ ಚಳವಳಿಯ ಸಂಚಾಲಕ ಡಾ.ನಿರಂಜನ್ ರೈ ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ ಮಹಮ್ಮದ್ ದಾರಿಮಿ ಮುಂತಾದ ಹಲವು ಪ್ರಮುಖರು ಪ್ರತಿಭಟನಯಲ್ಲಿ ಭಾಗವಹಿಸಿದ್ದಾರೆ









