ಬಜ್ಪೆ: ರಾಜ್ಯದ ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ವಿರೋಧಿಸಿ ಹಾಗೂ ಹಾಸ್ಟೆಲ್ ಸಮಸ್ಯೆಗಳನ್ನು ಬಗೆಹರಿಸಲೆಂದು ಸರಕಾರವನ್ನು ಆಗ್ರಹಿಸಿ ಎಬಿವಿಪಿಯ ಬಜ್ಪೆ ಶಾಖೆಯ ವಿದ್ಯಾರ್ಥಿ ಸದಸ್ಯರು ಸೆ.1ರಂದು ಬಜ್ಪೆ ಮುಖ್ಯ ಪೇಟೆಯಲ್ಲಿ ಪ್ರತಿಭಟನೆ ಸಲ್ಲಿಸಿ ಸರಕಾರಕ್ಕೆ ಮನವಿ ಸಲ್ಲಿಸಿದರು.
ಎಬಿವಿಪಿ ಬಜ್ಪೆ ಇದರ ಪ್ರಮುಖರಾದ ಶೋಹನ್ ಆಳ್ವ ಮಾತನಾಡಿ, ರಾಜ್ಯದಲ್ಲಿ ಶೈಕ್ಷಣಿಕ ರಂಗ ಹಲವಾರು ಸಮಸ್ಯೆಗಳನ್ನು ಎದುರುರಿಸುತ್ತಿದೆ. ಶಿಕ್ಷಣದ ಗುಣಮಟ್ಟ ಹಾಗೂ ಶಿಕ್ಷಣಕ್ಕೆ ಪ್ರೋತ್ಸಾಹ ಕಡಿಮೆಯಾಗಿದೆ. ಅಲ್ಲದೆ ವಿವಿಧ ಕಾಲೇಜ್ಗಳು ಹಲವಾರು ಸೌಲಭ್ಯದಿಂದ ವಂಚಿತವಾಗಿದೆ ಎಂದು ತಿಳಿಸಿದರು.


ನಂತರ ಮಾತಾಡಿದ ಅವರು, ರಾಜ್ಯದ ವಿದ್ಯಾರ್ಥಿಗಳ ಪರವಾಗಿರುವ ಯೋಜನೆಗಳನ್ನು ಜಾರಿ ಮಾಡಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಬದಲು ಇದನ್ನು ಸಂಪೂರ್ಣವಾಗಿ ಕಡೆಗಣಿಸುವುದು ಸರಕಾರದ ನಿರ್ಲಕ್ಷ್ಯತೆಯನ್ನು ತೋರಿಸುತ್ತದೆ. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಜಾರಿಯಲ್ಲಿ ಲೋಪ, ಎಸ್ಟಿ, ಎಸ್ಸಿ ವಿದ್ಯಾರ್ಥಿ ವೇತನಗಳಲ್ಲಿ ವಿಳಂಬ , ಹಾಸ್ಟೆಲ್ನಲ್ಲಿ ಮೂಲಭೂತ ಸಮಸ್ಯೆ , ಸರಕಾರಿ ಶಾಲಾಕಾಲೇಜ್ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶುಲ್ಕ ವಿನಾಯಿತಿ ಸಮರ್ಪಕವಾಗಿ ಜಾರಿಯಾಗದೇ ಇರುವುದರಿಂದ ಅವರು ಕಾಲೇಜನ್ನು ತೊರೆಯಬೇಕಾದ ಸ್ಥಿತಿ ಬಂದಿದೆ. ದಲಿತ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ವಿದ್ಯಾರ್ಥಿವೇತನ ಕಳೆದ ಎರಡು ವರ್ಷಗಳಿಂದ ಸಿಕ್ಕಿಲ್ಲ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಿಗೆ ವಿಧಿಸುವ ಹಲವು ಸೇವಾ ಶುಲಕ್ಷಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು. ಆದರೆ ಕೆಲವೊಂದು ಕಾಲೇಜ್ಗಳು ಸರಕಾರದ ಆದೇಶವನ್ನು ಗಾಳಿಗೆ ತೂರಿಕೊಂಡು ಬೆದರಿಸಿ ಹಣ ವಸೂಲಿ ಮಾಡುವುದು ಸರಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಇಂಥಾ ಕಾಲೇಜ್ಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಅವರು ಗುಡುಗಿದರು.
ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡರಾದ ಕೃಷ್ಣ ಪ್ರಸಾದ್, ಯತೀಶ್ ಮುಂತಾದವರು ಉಪಸ್ಥಿತರಿದ್ದರು. ಮತ್ತೊಬ್ಬ ಎಬಿವಿಪಿ ಪ್ರಮುಖ ಜಯೇಶ್ ಪಿ.ಕೆ. ನಿರೂಪಿಸಿದರು. ಪ್ರತಿಭಟನೆಯ ಕೊನೆಯಲ್ಲಿ ವಿದ್ಯಾರ್ಥಿ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಲಾದ ಮನವಿ ಪತ್ರವನ್ನು ಬಜ್ಪೆ ಪಂಚಾಯತ್ ಗ್ರಾಮ ಲೆಕ್ಕಿಗರ ಮುಖಾಂತರ ಸರಕಾರಕ್ಕೆ ಸಲ್ಲಿಸಲಾಯಿತು. ಬಜ್ಪೆ ಆಸುಪಾಸಿನ ಹಲವು ಕಾಲೇಜಿನ ಎಬಿವಿಪಿ ಸದಸ್ಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

