ಬಜ್ಪೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದು ಉದ್ವಿಗ್ನತೆಗೆ ಕಾರಣವಾದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಕುಪ್ಪೆಪದವುನಿನಲ್ಲಿ ಶುಕ್ರವಾರ ಸಂಜೆ ವೇಳೆ ನಡೆದಿದೆ. ರಾಜಕೀಯ ವೈಷಮ್ಯದಿಂದ ಈ ಮಾರಾಮಾರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದು, ಇತ್ತಂಡಗಳ ಮಧ್ಯೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶುಕ್ರವಾರ ಸಂಜೆ ಕಾಂಗ್ರೆಸ್ನ ರಝಾಕ್ ಬೆಂಬಲಿಗರು ಮತ್ತು ಜೆಡಿಎಸ್ನ ಹಮ್ಮಬ್ಬ ಬೆಂಬಲಿಗರು ರಾಜಕೀಯ ಧ್ವೇಷ ಹಿನ್ನೆಲೆ ಕಾದಾಟ ನಡೆಸಲು ಆರಂಭಿಸಿದರು. ಇತ್ತಂಡಗಳೂ ಗುಂಪು ಘರ್ಷಣೆಯಲ್ಲಿ ತೊಡಗಿದ ಕಾರಣ ಪರಿಸ್ಥಿತಿ ಬಿಗಡಾಯಿಸಲು ತೊಡಗಿತ್ತು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಬಜ್ಪೆ ಪೊಲೀಸರು ಸಮಯೋಚಿತವಾಗಿ ಪ್ರದೇಶಕ್ಕೆ ಆಗಮಿಸಿ ಇತ್ತಂಗಳ ಗುಂಪಿನ ಮುಖಂಡರ ಮನವೊಲಿಸಿ ಗಲಾಟೆಯನ್ನು ನಿಲ್ಲಿಸಿದ್ದಾರೆ. ಈ ಹಿಂದೆ ಪಂಚಾಯತ್ನ ಗ್ರಾಮ ಸಭೆಯ ವೇಳೆ ಗಲಾಟೆ ನಡೆದಿದ್ದು, ಇದರ ಮುಂದುವರಿದ ಭಾಗವಾಗಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ರಝಾಕ್ ಹಾಗೂ ಹಮ್ಮಬ್ಬ ಬಜ್ಪೆ ಠಾಣೆಗೆ ದೂರು ನೀಡಿದ್ದು, ಇತ್ತಂಡಗಳ ಸದಸ್ಯರ ಮೇಲೆ ಬಜ್ಪೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
