ನವದೆಹಲಿ: ದೇಶದೆಲ್ಲೆಡೆ ಚುನಾವಣಾ ಕಾವು ಹೆಚ್ಚುತ್ತಿದ್ದು ಎಲ್ಲಾ ಪಕ್ಷಗಳಿಂದ ಬಹುತೇಕ ಎಲ್ಲಾ ಮುಖಂಡರು ಚುನಾವಣಾ ಪ್ರಚಾರದಲ್ಲಿ ಮುಳುಗಿಹೋಗಿದ್ದರೂ ಪ್ರಧಾನಿ ಮನಮೋಹನ್ ಸಿಂಗ್ ಮಾತ್ರ ಎಲ್ಲೂ ಕಾಣಿಸಿಕೊಳ್ಳದಿರುವುದು ನಿಜಕ್ಕೂ ಅಚ್ಚರಿ ಹುಟ್ಟಿಸಿದೆ. ಸಿಂಗ್ ಈವರೆಗೆ ಕೇವಲ 4 ಸಮಾವೇಶಗಳಲ್ಲಿ ಭಾಷಣ ಮಾಡಿದ್ದಾರೆ. ಮನಮೋಹನ್ ಸಿಂಗ್ ಹೆಚ್ಚೂಕಡಿಮೆ ರಾಜಕೀಯ ನಿವೃತ್ತಿ ಪಡೆದುಕೊಂಡಿದ್ದರೂ ಪ್ರಧಾನಿಯಾಗಿ ಅವರು ಜನರ ಮುಂದೆ ಬಂದು ಮಾತನಾಡಬಹುದಿತ್ತಲ್ಲ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಆದರೆ, ಮೂಲಗಳ ಪ್ರಕಾರ ಮನಮೋಹನ್ ಸಿಂಗ್ ಅವರನ್ನ ಬೇಕಂತಲೇ ಮೂಲೆಗುಂಪು ಮಾಡಲಾಗಿದೆಯಂತೆ.
ಇದಕ್ಕೆಲ್ಲಾ ಕಾರಣ ಕಾಂಗ್ರೆಸ್್ ಅಧಿನಾಯಕಿ ಸೋನಿಯಾ ಗಾಂಧಿ. ಪ್ರಧಾನಿಯವರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬೇಡಿ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರೇ ಹುಕುಂ ಹೊರಡಿಸಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು. ಪ್ರಧಾನಿ ಮನಮೋಹನ್ ಸಿಂಗ್ ಅವರೇನಾದರೂ ಜನರ ಮುಂದೆ ಬಂದು ನಿಂತರೆ, ಯುಪಿಎ ಸರ್ಕಾರದ ವೈಫಲ್ಯಗಳು ತೋರ್ಪಡಬಹುದು. ಮೇಲಾಗಿ, ಸಿಂಗ್ ಅವರು ಜನರನ್ನ ಸೆಳೆಯುವಷ್ಟು ವಾಗ್ಪಟುತ್ವ ಹೊಂದಿಲ್ಲದಿರುವುದೂ ಇದಕ್ಕೆ ಕಾರಣವೆನ್ನಲಾಗುತ್ತಿದೆ.
ಆದರೆ, ಎರಡು ಅವಧಿ ಈ ದೇಶದ ಪ್ರಧಾನಿಯಾದ ವ್ಯಕ್ತಿಯೊಬ್ಬರು ಜನರಿಗೆ ಮುಖ ತೋರಿಸದಂಥ ಸ್ಥಿತಿ ಬಂದಿರುವುದು ನಿಜಕ್ಕೂ ಶೋಚನೀಯವೇ ಸರಿ.


