ಬಂಟ್ವಾಳ: ಸರ್ಕಾರಿ ಪ್ರೌಢಶಾಲೆಗಳಲ್ಲಿ ಆರಂಭಗೊಂಡಿರುವ ಬಾನುಲಿ ಪಾಠವು ಮಕ್ಕಳಿಗೆ ಶೈಕ್ಷಣಿಕವಾಗಿ ಹೆಚ್ಚಿನ ಜ್ಞಾನ ನೀಡುತ್ತಿದ್ದ್ದು, ಇದರಿಂದಾಗಿ ಮಕ್ಕಳು ಬಾನುಲಿ ಪಾಠಕ್ಕೆ ಮತ್ತಷ್ಟು ಆಕರ್ಷಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನವು ಬೆಳ್ಳಿಹಬ್ಬ ಪ್ರಯುಕ್ತ ಜಿಲ್ಲೆಯಾದ್ಯಂತ ಸರ್ಕಾರಿ ಪ್ರೌಢಶಾಲೆಗೆ ಒಟ್ಟು ನೂರು ಉಚಿತ ರೇಡಿಯೋ ವಿತರಿಸುತ್ತಿದೆ. ಈ ಪೈಕಿ ಬಂಟ್ವಾಳ ತಾಲ್ಲೂಕಿಗೆ ಒಟ್ಟು 22 ರೇಡಿಯೋ ವಿತರಿಸಲಾಗುತ್ತಿದೆೆ ಎಂದು ಪ್ರತಿಷ್ಠಾನ ಉಪಾಧ್ಯಕ್ಷ ಪ್ರೇಮ್ನಾಥ ಆಳ್ವ ಹೇಳಿದ್ದಾರೆ.

ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ವಿವಿಧ ಸರ್ಕಾರಿ ಪ್ರೌಢಶಾಲೆಗಳಿಗೆ ಬಾನುಲಿ ಪಾಠಕ್ಕಾಗಿ ವಿಜಯಾ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ವತಿಯಿಂದ ಮಂಗಳವಾರ ಸಂಜೆ ಉಚಿತ ರೇಡಿಯೋ ವಿತರಿಸಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಮಾತನಾಡಿ, ರೇಡಿಯೋ ಸಾಧನವು ಕೇವಲ ಬಾನುಲಿ ಪಾಠಕ್ಕೆ ಸೀಮಿತವಾಗಿರದೆ ಸುದ್ದಿ ಮತ್ತಿತರ ಮೂಲಕ ಸಾಮಾನ್ಯ ಜ್ಞಾನವನ್ನೂ ನೀಡುತ್ತದೆ ಎಂದರು.
ಪತ್ರಕರ್ತ ರಾಜಾ ಬಂಟ್ವಾಳ ಮಾತನಾಡಿ, ರೇಡಿಯೋ ಮೂಲಕ ಶಿಕ್ಷಣ, ಕ್ರೀಡೆ, ಕೃಷಿ ಮಾಹಿತಿ ಜೊತೆಗೆ ದೇಶದ ಕಲಾ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ ಎಂದರು.
ವಿಜಯಾ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕ ಗುರುದತ್ತ ಶೆಣೈ, ಪ್ರತಿಷ್ಠಾನ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಬಸಪ್ಪ ಮುಧೋಳ ಮತ್ತಿತರರು ಮಾತನಾಡಿದರು.
ಶಿಕ್ಷಣ ಸಮನ್ವಯಾಧಿಕಾರಿ ರಾಜೇಶ್ ಸ್ವಾಗತಿಸಿ, ಶಿಕ್ಷಣ ಸಂಯೋಜಕಿ ಸುಜಾತ ವಂದಿಸಿದರು.
