ಬಂಟ್ವಾಳ : ರೈತರ ಶ್ರೇಯೋಭಿವೃದ್ದಿಗಾಗಿ ಈ ಹಿಂದಿನ ಸರಕಾರಗಳು ಕೈಗೊಂಡ ‘ಉಳುವವನೇ ಹೊಲದೊಡೆಯ’ ಎಂಬ ರೈತಪರ ಸುಧಾರಣೆಗೆ ಬದಲಾಗಿ ಇಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗಾರಿಕೋದ್ಯಮಿಗಳಿಗೆ, ಬಂಡವಾಳ ಶಾಹಿಗಳಿಗೆ, ವಸಾಹತುಶಾಹಿಗಳಿಗೆ ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ರೈತ ವಿರೋಧಿ ನೀತಿಗಳನ್ನು ಅನುಸರಿಸುವ ಮೂಲಕ ರೈತರ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ ಎಂದು ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಚ್ ವಿ ರಾವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ ತಾಲೂಕು ಘಟಕದ ವತಿಯಿಂದ ಶುಕ್ರವಾ ಸಂಜೆ ಬಿ ಸಿ ರೋಡಿನಲ್ಲಿ ನಡೆದ ‘ಬಹಿರಂಗ ಅಹವಾಲು ಚಳುವಳಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ಅಕಾಲಿಕ ಮಳೆ ಮತ್ತು ಬೆಲೆ ಅನಿಶ್ಚಿತತೆಯಿಂದ ಕಂಗೆಟ್ಟಿರುವ ರೈತರಿಗೆ ಸರಕಾರವು ಧೈರ್ಯ ತುಂಬುವ ಬದಲಾಗಿ ಮಧ್ಯವರ್ತಿಗಳು ಮತ್ತು ಕೈಗಾರಿಕೋದ್ಯಮಿಗಳು ಮಾತ್ರ ಆರ್ಥಿಕವಾಗಿ ಬಲಿಷ್ಠರಾಗುವಂತಹ ಕ್ರಮ ಕೈಗೊಳ್ಳುತ್ತಿದೆ. ಈ ಕಾರಣಕ್ಕೆ ರಾಜ್ಯದ ರೈತರಿಗೆ ಧೈರ್ಯ ತುಂಬಲು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ‘ಬಹಿರಂಗ ಅಹವಾಲು ಚಳುವಳಿ’ ಮೂಲಕ ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿಗಳ ಗಮನ ಸೆಳೆಯಲು ರಾಜ್ಯವ್ಯಾಪಿ ಚಳುವಳಿ ನಡೆಸುತ್ತಿದೆ ಎಂದರು.
ಸಿಪಿಐ ಜಿಲ್ಲಾ ಮುಖಂಡ ಪಿ ಸಂಜೀವ, ಸುರೇಶ್ ಕುಮಾರ್, ಜಿಲ್ಲಾ ಮಂಡಳಿ ಸದಸ್ಯರಾದ ಸರಸ್ವತಿ ಕಡೇಶಿವಾಲಯ, ಚಂದ್ರಾವತಿ, ಪ್ರಮುಖರಾದ ಕೆ ಈಶ್ವರ್, ಬಾಬು ಭಂಡಾರಿ, ಬಿ ಶೇಖರ್, ಸುರೇಶ್ ಕುಮಾರ್ ಮೊದಲಾದವರು ಈ ಚಳುವಳಿಯ ನೇತೃತ್ವ ವಹಿಸಿದ್ದರು.
