ಮೂಡುಬಿದಿರೆ: ಆಟೋ ಪಾರ್ಕ್ ಬಗ್ಗೆ ಗೊಂದಲ, ನಿಯಮೋಲ್ಲಂಘನೆಯಂತಹ ಘಟನೆಗಳನ್ನು ನಿಯಂತ್ರಿಸಲು ಪುರಸಭಾ ವ್ಯಾಪ್ತಿಯ ಎಲ್ಲ ಆಟೋ ಪಾರ್ಕ್ ಗಳಿಗೆ ಶೀಘ್ರವೇ ನಂಬರ್ ನೀಡಲಾಗುವುದು. ಪುರಸಭೆ ಹಾಗೂ ಪೊಲೀಸರ ನಿರ್ದೇಶನದಂತೆ ಎಲ್ಲ ಆಟೋರಿಕ್ಷಾಗಳಿಗೂ ನಂಬರ್ ಸ್ಟಿಕರ್ ಅಳವಡಿಕೆ ವ್ಯವಸ್ಥೆ ಮಾಡಿಸಲಾಗುವುದು ಎಂದು ಮೂಡುಬಿದಿರೆ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ಹೇಳಿದರು. ಪುರಸಭೆಯಲ್ಲಿ ಪುರಸಭಾ ಆಡಳಿತ, ಪೊಲೀಸ್ ಇಲಾಖೆ, ಆಟೋ ಚಾಲಕ ಮಾಲಕ ಸಂಘ ಹಾಗೂ ಫೆಡರೇಶನ್ ಆಫ್ ಕರ್ನಾಟಕ ಆಟೋ ಡ್ರೈವರ್ಸ್ ಯೂನಿಯನ್ ಸಹಯೋಗದಲ್ಲಿ ನಡೆದ ಜಂಟಿ ಸಭೆಯಲ್ಲಿ ಈ ಕುರಿತು ವಿವರಿಸಿದರು.

ನಂಬರಿಂಗ್ ಅಳವಡಿಸುವುದರಿಂದ ನಿಯಮ ಪಾಲನೆಯ ಜತೆಗೆ ಅಪರಾಧ ಕೃತ್ಯಗಳನ್ನೂ ತಡೆಯಬಹುದು. ರಾತ್ರಿ ವೇಳೆ ಹೊರ ವಲಯದಿಂದ ಬರುವ ಆಟೋಗಳ ಮೇಲೆ ನಿಗಾವಿಡಲೂ ಸಹಕಾರಿಯಾಗುತ್ತದೆ. ಪುರಸಭೆಯವರು ಅಧಿಕೃತ ಆಟೋ ಪಾಕರ್್ಗಳನ್ನು ಘೋಷಣೆ ಮಾಡುವುದು ಮಾತ್ರವಲ್ಲ, ಆಟೋ ಚಾಲಕರಿಗೆ ಹಾಗೂ ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಆಟೋದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಎದುರಿಗೆ ಕುಳ್ಳಿರಿಸುವುದು. ಲೆಕ್ಕಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು, ಮಕ್ಕಳನ್ನು ತುಂಬಿಸುವುದನ್ನು ಆಟೋ ಚಾಲಕರು ನಿಲ್ಲಿಸಬೇಕು. ಮುಖ್ಯವಾಗಿ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ನಿಯಮವನ್ನು ಪಾಲಿಸಬೇಕು ಎಂದು ಆಟೋ ಚಾಲಕರಿಗೆ ಸೂಚನೆ ನೀಡಿದರು.
ಪುರಸಭಾ ಸದಸ್ಯ ಪಿ.ಕೆ ಥೋಮಸ್ ಮಾತನಾಡಿ, ಮೂಡುಬಿದರೆ ಪೇಟೆ ಮಾತ್ರವಲ್ಲದೆ, ಪುರಸಭಾ ವ್ಯಾಪ್ತಿಯಲ್ಲಿರುವ ಇತರೆಡೆಯ ಪಾರ್ಕ್ ಹಾಗೂ ಆಟೋಗಳಿಗೂ ಇದೇ ಮಾದರಿಯಲ್ಲಿ ಸಂಖ್ಯೆ ನೀಡಬೇಕು ಎಂದರು.
ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಳಾ, ಮುಖ್ಯಾಧಿಕಾರಿ ಶೀನ ನಾಯ್ಕ್, ಮೂಡುಬಿದರೆ ವಲಯ ಆಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಭಾಸ್ಕರ ಆಚಾರ್ಯ, ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಸಂಚಾಲಕ ಪ್ರದೀಪ್ ರೈ, ಗೌರವ ಸಲಹೆಗಾರ ರಾಮಚಂದ್ರ ಭಟ್, ಫೆಡರೇಶನ್ ಆಫ್ ಕರ್ನಾಟಕ ಆಟೋ ಡ್ರೈವರ್ಸ್ ಯೂನಿಯನ್ನ ಗೌರವಾಧ್ಯಕ್ಷ ಯಾದವ ಶೆಟ್ಟಿ, ಅಧ್ಯಕ್ಷ ವಿಶ್ವನಾಥ ಎಸ್., ಕಾರ್ಯದರ್ಶಿ ಅಭಯ ಕುಮಾರ್ ಜೈನ್ ಉಪಸ್ಥಿತರಿದ್ದರು.
