ಮೂಡುಬಿದಿರೆ : ಸಂಗೀತ – ನೃತ್ಯ, ಸಾಹಿತ್ಯ – ಸಂಸ್ಕೃತಿಗಳ ತರಬೇತಿ, ಪ್ರದರ್ಶನ ಮತ್ತು ಪ್ರಸರಣಗಳನ್ನು ಲಕ್ಷ್ಯವಾಗಿರಿಸಿಕೊಂಡಿರುವ ಸಾಂಸ್ಕೃತಿಕ ಸಂಸ್ಥೆ ” ನಾಟ್ಯಾಯನ ಮೂಡುಬಿದಿರೆ, ಕೋಟೆಬಾಗಿಲು” ಇದರ ಉದ್ಘಾಟನ ಸಮಾರಂಭ ಇದೇ 9 ರಂದು ಸಂಜೆ ಗಂಟೆ 4ಕ್ಕೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ನಡೆಯಲಿದೆ. ಎಂದು
ನಾಟ್ಯಾಯನದ ನಿರ್ದೇಶಕ ಕೆ.ವಿ ರಮಣ್ ಹೇಳಿದರು. ಬುಧವಾರ ಪ್ರೆಸ್ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಯುವಸಬಲೀಕರಣ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ನಾಟ್ಯಾಯನವನ್ನು ಆಳ್ವಾಸ್ ಎಜುಕೇಶನ್ ಪೌಂಡೇಶನ್ ಅಧ್ಯಕ್ಷ ಡಾ.ಮೋಹನ ಆಳ್ವ ಉದ್ಘಾಟಿಸಲಿದ್ದಾರೆ. ಅಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಈಶ್ವರ ಭಟ್ ಆಶೀರ್ವಚನ ನೀಡಲಿದ್ದು, ಗುರು ಶಾರದಾಮಣಿ ಶೇಖರ್ ಶುಭಾಶಂಸನೆ ಗೈಯಲಿದ್ದಾರೆ.
ಪುರಸಭಾಧ್ಯಕ್ಷೆ ರೂಪ ಎಸ್. ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ದೇವೆಂದ್ರ ಹೆಗ್ಡೆ, ತುಳು ಸಾಹಿತ್ಯ ಆಕಾಡೆಮಿಯ ಪೂರ್ವಾಧ್ಯಕ್ಷ ಉಮಾನಾಥ ಕೋಟ್ಯಾನ್, ಜಯಶ್ರೀ ಅಮರನಾಥ ಶೆಟ್ಟಿ, ಪುರಸಭಾ ಸದಸ್ಯೆ ರಮಣಿ, ದ.ಕ.ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಂಗಳೂರು ಪ್ರಾಯೋಜಕತ್ವದಲ್ಲಿ ಸಾಂಸ್ಕೃತಿಕ ವೈಭವ ನಡೆಯಲಿದ್ದು ಮಂಗಳೂರಿನ ಸನಾತನ ನಾಟ್ಯಾಲಯದವರಿಂದ “ಸನಾತನ ನಾಟ್ಯಾಂಜಲಿ” ಪ್ರದರ್ಶನಗೊಳ್ಳಲಿದೆ. ದೂರದರ್ಶನ ಕಲಾವಿದೆ ವಿದುಷಿ ಮೋನಿಕಾ ರಾವ್ ಭರತನಾಟ್ಯ ಮತ್ತು ದ.ಕ.ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಬಾಲಕಲಾವಿದೆ ಅಯನಾ.ವಿ.ರಮಣ್ ಬಹುಮುಖ ಪ್ರತಿಭಾ ಪ್ರದರ್ಶನ ಮಾಡಲಿದ್ದಾರೆ. ಬೆಳುವಾಯಿ ಯಕ್ಷದೇವ ಮಿತ್ರ ಮಂಡಳಿಯವರ ಪ್ರಾರ್ಥನಾ ಯಕ್ಷಗಾನ ಮತ್ತು ಚಿತ್ರ ಕಲಾವಿದ ಎಮ್.ಆರ್.ಗಣೇಶ್ ಅವರ ಸಾಂದರ್ಭಿಕ ಚಿತ್ರ ರಚನೆಯ ಚಮತ್ಕಾರಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ನಾಟ್ಯಾಯನದ ಅಧ್ಯಕ್ಷ ಶ್ರೀಧರ ಹೆಗ್ಡೆ ತಿಳಿಸಿದರು. ಗೌರವ ಅಧ್ಯಕ್ಷ ರತ್ನಾಕರ ದೇವಾಡಿಗ, ಕಾರ್ಯದರ್ಶಿ ಮಣೀಂದ್ರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
