ಬಂಟ್ವಾಳ: 94ಸಿ ಯೋಜನೆಯಡಿ ಅಕ್ರಮಗಳು ನಡೆಯುತ್ತಿದ್ದು ಕಂದಾಯಾಧಿಕಾರಿಗಳೇ ಇದರಲ್ಲಿ ನೇರ ಭಾಗಿಗಳಾಗಿರುವುದಾಗಿ ಸದಸ್ಯ ಮಾಧವ ಮಾವೆ ಆರೋಪಿಸಿದ್ದಾರೆ.ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ತಾ.ಪಂ.ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆನಡೆದಿದ್ದು ಸಭೆಯ ಕಾವು ಹೆಚ್ಚಿಸಿತು. ಕಂದಾಯ ಇಲಾಖಾ ಅಧಿಕಾರಿಗಳಿಗೆ ಸಾವಿರಾರು ರುಪಾಯಿ ಹಣ ನೀಡಿದರೆ ಫಲಾನುಭವಿ ಬಯಸಿದ್ದಲ್ಲಿ ನಿವೇಶನ ಒದಗಿಸುತ್ತಾರೆ. 94 ಸಿ ಯೋಜನೆಯಡಿ ಹಕ್ಕು ಪತ್ರವನ್ನು ವಿತರಿಸುತ್ತಾರೆ. ಆದರೆ ಬಡ ಅರ್ಹ ಫಲಾನುಭವಿಗೆ ಹಕ್ಕು ಪತ್ರ ವಿತರಿಸಲು ಸತಾಯಿಸುತ್ತಾರೆ ಎಂದು ದೂರಿದರು. ಪಿಡಬ್ಲ್ಯುಡಿ ರಸ್ತೆಯನ್ನೇ ಅತಿಕ್ರಮಿಸಿ ಮನೆ ನಿರ್ಮಿಸಿವರಿಗೂ ಹಕ್ಕು ಪತ್ರ ನೀಡಿದ್ದೀರಿ. ಈ ಬಗ್ಗೆ ನನ್ನಲ್ಲಿ ಸಾಕ್ಷಿ ಇದ್ದು ಬರುವುದಾದರೆ ಈಗಲೇ ತೋರಿಸುವುದಾಗಿ ಸವಾಲೆಸದರು. ಅಧ್ಯಕ್ಷ ಯಶವಂತ ದೇರಾಜೆ ಮದ್ಯ ಪ್ರವೇಶಿಸಿ ಮಾತನಾಡಿ 94 ಸಿ ಯೋಜನೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸದಸ್ಯರ ಗಮನಕ್ಕೆ ಬಂದಿದ್ದಲ್ಲಿ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ತಹಶೀಲ್ದಾರ್ ಹಾಗೂ ಸರ್ವೆ ಇಲಾಖೆಯೊಂದಿಗೆ ಸಭೆ ನಡೆಯಲಿದ್ದು ಸಮಸ್ಯೆಯನ್ನು ಬಗೆಹರಿಸುವ ಎಂದು ತಿಳಿಸಿದ ಬಳಿಕ ಚರ್ಚೆಗೆ ತೆರೆ ಬಿತ್ತು.


ರಾಯಿ ಗ್ರಾಮಪಂಚಾಯಿತಿ ಪಿಡಿಓ ವರ್ಗಾವಣೆಯ ಬಗ್ಗೆ ಸಭೆಯಲ್ಲಿ ಗದ್ದಲದ ವಾತವರಣ ಉಂಟಾಯಿತು. ಪಂಚಾಯಿತಿಯಲ್ಲಿ ಅವ್ಯವಹರ ನಡೆಸಿ, ಅಧ್ಯಕ್ಷ ಉಪಾಧ್ಯಕ್ಷರ ವಿರುದ್ದ ಏಕವಚನದಲ್ಲಿ ಮಾತನಾಡಿದರೂ ಪಿಡಿಓ ವಿರುದ್ದ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಸದಸ್ಯ ವಸಂತ ಅಣ್ಣಳಿಕೆ ಅಸಮದಾನ ವ್ಯಕ್ತ ಪಡಿಸಿದರು. ಇದೇ ರೀತಿ ಮುಂದುವರಿದಲ್ಲಿ ಮುಂದಿನ ಗ್ರಾಮಸಭೆಯಲ್ಲಿ ಗ್ರಾಮಸ್ಥರೊಂದಿಗೆ ಸೇರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಸಾಮಾಥ್ರ್ಯ ಸಭೆಯಲ್ಲಿ ನಡೆಯುತ್ತಿದ್ದ ಸಭೆಯೊಂದರಲ್ಲಿ ಬಾಗವಹಿಸಲು ಬಂದಿದ್ದ ರಾಯಿ ಗ್ರಾ,ಪಂ.ಉಪಾಧ್ಯಕ್ಷೆ ಪುಷ್ಪಲತಾ ತಪ್ಪಿ ಸಾಮಾನ್ಯ ಸಭೆಯಲ್ಲಿ ಬಾಗವಹಿಸಿದ್ದರು. ಪಿಡಿಓ ವಿಚಾರ ಸಭೆಯಲ್ಲಿ ಪ್ರಸ್ತಾಪವಾದ ಹಿನ್ನಲೆಯಲ್ಲಿ ಪುಷ್ಪಲತಾ ಎದ್ದು ನಿಂತು ಪಿಡಿಓ ವಿರುದ್ದ ಅಳಲು ತೋಡಿಕೊಂಡರು. ಬಳಿಕ ಕಾರ್ಯನಿರ್ವಾಹಣಾದಿಕಾರಿ ಹಾಗೂ ಸದಸ್ಯ ವಸಂತ ಅಣ್ಣಳಿಕೆ ನಡುವೆ ಈ ಬಗ್ಗೆ ವಾಕ್ಸಮರ ನಡೆಯುತ್ತಿದಂತೆಯೇ ಎದ್ದು ನಿಂತ ಸದಸ್ಯೆ ಲವಿನಾ ಡಿಸೋಜಾ ಪಂಚಾಯತ್ ಉಪಾಧ್ಯಕ್ಷೆ ಸಾಮಾನ್ಯ ಸಭೆಯಲ್ಲಿ ಹೇಗೆ ಭಾಗವಹಿಸಿದ್ದಾರೆ ಎಂದು ಪ್ರಶ್ನಸಿದಾಗ ಎಲ್ಲರೂ ಮುಖಮುಖ ನೋಡಿಕೊಳ್ಳವಂತಾಯಿತು. ಈ ಬಗ್ಗೆ ಉಪಾದ್ಯಕ್ಷೆಗೆ ಮನವರಿಕೆ ಮಾಡಿಕೊಟ್ಟು ಸಾಮಾನ್ಯ ಸಭೆಯಿಂದ ಕಳುಹಿಸಿ ಕೊಡಲಾಯಿತು.
ಸಭೆಯ ಮಧ್ಯೆ ಮೊಬೈಲ್‍ನಲ್ಲಿ ಸಕ್ರಿಯ:
ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೆಲ ಸದಸ್ಯರು ಚರ್ಚೆಯಲ್ಲಿ ಗಂಭೀರವಾಗಿ ಭಾಗವಹಿಸಿದ್ದರೆ ಹೆಚ್ಚಿನ ಸದಸ್ಯರು ಸಭಾ ಗೌರವ ಮರೆತು ಮೊಬೈಲ್‍ನಲ್ಲಿ ಮಾತನಾಡುತ್ತಿದ್ದರು. ಇನ್ನೂ ಕೆಲವರು ಈ ಸಭೆಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಪರಸ್ಪರ ತಮಾಷೆ ಮಾತಿನಲ್ಲಿ ನಿರತರಾಗಿದ್ದರು. ಸದಸ್ಯರ ನೀರಸ ಚರ್ಚೆಯಿಂದ ಬೇಸತ್ತು ಕೆಲ ಅಧಿಕಾರಿಗಳೂ ಮೊಬೈಲ್‍ನಲ್ಲಿ ತೊಡಗಿಸಿಕೊಂಡಿದ್ದರು.

