-ಡಾ| ನಾಗವೇಣಿ ಮಂಚಿ
ಬಂಟ್ವಾಳ: ಕಲೆ, ಸಾಹಿತ್ಯಕ್ಕೆ ಬದುಕನ್ನು ಅರಳಿಸುವ ಶಕ್ತಿ ಇದೆ. ಕವಿಗಳು ಕಲಾನುಭವದ ಮೂಲಕ ಜೀವನ ಶ್ರೀಮಂತಿಕೆಯ ಮೂಲಕ ಕಲಾಕೃತಿಗಳನ್ನು ಸೃಷ್ಟಿಸುತ್ತಾರೆ. ಮನುಷ್ಯನಲ್ಲಿ ಮಾನವೀಯ ಸಂಬಂಧ, ಆರೋಗ್ಯಪೂರ್ಣ ಮನಸ್ಥಿತಿಯನ್ನು ರೂಪಿಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ. ಪಠ್ಯ ಚಟುವಟಿಕೆಯ ಜೊತೆಗೆ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಕೂಡಾ ಅಗತ್ಯ. ವಿದ್ಯಾರ್ಥಿಗಳಲ್ಲಿ ನಾಗರಿಕ ಸಮಾಜದ ತಿಳುವಳಿಕೆಯನ್ನು ಪತ್ರಿಕೆಗಳು ನೀಡುತ್ತವೆ. ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಕಾಲೇಜುಗಳಲ್ಲಿರುವ ಭಿತ್ತಿ ಪತ್ರಿಕೆಗಳು ಸೂಕ್ತ ವೇದಿಕೆನ್ನು ಕಲ್ಪಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಕವಿ, ಕಲಾವಿದನಾಗುವ ಶಕ್ತಿಯಿದೆ ಎಂದು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ| ನಾಗವೇಣಿ ಮಂಚಿ ಅಭಿಪ್ರಾಯಪಟ್ಟರು.
ಅವರು ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪ.ಪೂ ಕಾಲೇಜಿನಲ್ಲಿ ಕನ್ನಡ ಸಂಘದ ಆಯೋಜಿಸಿದ್ದ ಹೊಂಬೆಳಕು ಭಿತ್ತಿ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡದ ಪ್ರಸಿದ್ಧ ಬರಹಗಾರರು ಕಾಲೇಜು ಗೋಡೆ ಪತ್ರಿಕೆಗೆ ಬರೆದು ಸಾಹಿತಿಗಳಾಗಿದ್ದಾರೆ. ಕಲಾವಿದನಿಗೆ ಬೇಕಾಗುವುದು ಅನುಭವ. ಅನುಭವವನ್ನು ಕಲಾವಿದ ತಮ್ಮ ಪರಿಸರದಿಂದ, ಪುಸ್ತಕಗಳಿಂದ ಪಡೆದುಕೊಳ್ಳುತ್ತಾರೆ. ಜೀವನಾನುಭವದಿಂದ ಮೂಡಿ ಬಂದ ಬರಹಗಳು ಚಿರಸ್ಥಾಯಿಯಾಗಿ ನಿಲ್ಲುತ್ತವೆ. ಕಲೆ, ಸಾಹಿತ್ಯಗಳು ಬದುಕಿನ ನೋವು, ಅವಮಾನ, ಆಕ್ರೋಶಗಳನ್ನು ಶಮನ ಮಾಡಿ ನೆಮ್ಮದಿಯನ್ನು ಕೊಡುತ್ತದೆ. ಯಾವುದೇ ಒಳ್ಳೆಯ ಪುಸ್ತಕವನ್ನು ಓದಿದ ನಂತರದಲ್ಲಿ ಸಿಗುವ ಆನಂದ ಮರೆಯಲು ಅಸಾಧ್ಯ. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದೆಸೆಯಲ್ಲೇ ಕುವೆಂಪು, ಶಿವರಾಮ ಕಾರಂತ, ಬೇಂದ್ರೆ, ತೇಜಸ್ವಿ ಮೊದಲಾದವರ ಬರಹಗಳನ್ನು ಓದುವ ಅಗತ್ಯವಿದೆ. ವಿದ್ಯಾರ್ಥಿಗಳು ಮಾಡುವ ಯಾವುದೇ ಕಾರ್ಯದಲ್ಲಿಯೂ ತಲ್ಲೀನತೆ ಬೇಕು. ನಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ನೋಡುವ ಅಭ್ಯಾಸ, ಕುತೂಹಲದಿಂದ ಒಬ್ಬ ಒಳ್ಳೆಯ ಕವಿ ಮೂಡಿ ಬರುತ್ತಾನೆ. ಜೀವನ ಸಮೃದ್ಧಿಯೇ ಉತ್ತಮ ಸಾಹಿತ್ಯದ ಗುಣ ಎಂದರು.
ಪ.ಪೂ ಕಾಲೇಜು ಪ್ರಾಂಶುಪಾಲೆ ಶಶಿಕಲಾ ಕೆ. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಸ್ತುತಿ ಪಡಿಸಲು ಹೊಂಬೆಳಕು ಭಿತ್ತಿ ಪತ್ರಿಕೆ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಹೊಂಬೆಳಕು ಭಿತ್ತಿ ಪತ್ರಿಕೆಯ ಸಂಯೋಜಕ ಉಪನ್ಯಾಸಕ ಚೇತನ್ ಮುಂಡಾಜೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಹೊಂಬೆಳಕು ಭಿತ್ತಿ ಪತ್ರಿಕೆ ಸಂಪಾದಕ ಮಂಡಳಿ ಸದಸ್ಯರಾದ ವಿದ್ಯಾರ್ಥಿನಿ ರಶ್ಮಿತಾ ವಂದಿಸಿ, ತೇಜಸ್ವಿ ಕಾರ್ಯಕ್ರಮ ನಿರ್ವಹಿಸಿದರು.

