ಬಂಟ್ವಾಳ : ಬದುಕಿನ ಎಲ್ಲ ರಂಗಗಳಲ್ಲಿಯೂ ವಿಜ್ಞಾನ ತಂತ್ರಜ್ಞಾನ ಅನ್ವಯವಾಗುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಅನ್ವಯಿಕ ವಿಜ್ಞಾನದ ಜೊತೆಯಲ್ಲಿ ಮೂಲವಿಜ್ಞಾನದ ಕಲಿಕೆಯ ಕಡೆಗೆ ಆಸಕ್ತಿ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಬಂಟ್ವಾಳದ ಆಸುಪಾಸಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸರಕಾರಿ ಪ.ಪೂ ಕಾಲೇಜು, ಬಿ.ಮೂಡ ಇಲ್ಲಿಗೆ ವಿಜ್ಞಾನ ವಿಭಾಗವನ್ನು ಮಂಜೂರುಗೊಳಿಸಲಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆಯ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜು ಇಲ್ಲಿಗೆ ನೂತನವಾಗಿ ಮಂಜೂರುಗೊಂಡ ವಿಜ್ಞಾನ ವಿಭಾಗ, 2015-16ನೇಸಾಲಿನ ಎನ್.ಎಸ್.ಎಸ್ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ಮಾಹಿತಿ ಎಸ್.ಎಂ.ಎಸ್ ಸೌಲಭ್ಯವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.

ಬಂಟ್ವಾಳ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಸ್ಥಳೀಯ ಪುರಸಭಾ ಸದಸ್ಯ ಮಹಮ್ಮದ್ ಇಕ್ಬಾಲ್, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬೂಡಾ ಅಧ್ಯಕ್ಷ ಪಿಯುಸ್ ರಾಡ್ರಿಗಸ್, ಕ್ಷೇತ್ರಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಭಾಗವಹಿಸಿದ್ದರು. ವಿಶೇಷ ಅತಿಥಿಗಳಾಗಿ ದೆಹಲಿಯ ತಾಜ್ ಇಂಜಿನಿಯರಿಂಗ್ನ ವ್ಯವಸ್ಥಾಪಕ ನಿರ್ದೇಶಕ ಹರಿ ನಾಯರ್ ಭಾಗವಹಿಸಿದ್ದರು. ಮಂಗಳೂರು ಯೆನೆಪೋಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ವಿಶೇಷ ಉಪನ್ಯಾಸ ನೀಡಿದರು. ದ.ಕ ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಚಾರ್ಯರ ಸಂಘದ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಪ್ರಾಂಶುಪಾಲೆ ಸರಸ್ವತಿ ಬಿ. ಇವರನ್ನು ಸಚಿವರು ಅಭಿನಂಧಿಸಿದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರೇಮ್ ಪ್ರಕಾಶ್ ಡಿಕ್ರೂಸ್ ಹಾಗೂ ಸಮಿತಿ ಸದಸ್ಯರಾದ ಜಗದೀಶ್ ಕುಂದರ್, ಉಮೇಶ ಬೋಳಂತೂರು, ಪಿ.ಎಸ್ ಅಬ್ದುಲ್ ಹಮೀದ್, ಮಹಮ್ಮದ್ ರಫೀಕ್ ಆಲಡ್ಕ, ಆನಂದ ಸಾಲ್ಯಾನ್, ಸತೀಶ್ ಕುಲಾಲ್, ಲತೀಫ್ ಖಾನ್, ರಮೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಸರಸ್ವತಿ ಬಿ. ಸ್ವಾಗತಿಸಿ, ಉಪನ್ಯಾಸಕ ಯೂಸುಫ್ ವಂದಿಸಿದರು. ಉಪನ್ಯಾಸಕಿ ಯಶೋಧಾ ಕೆ. ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
