ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ರಾಯ್ ಬರೇಲಿಯಲ್ಲಿ ಆಪ್ ನ ಅಭ್ಯರ್ಥಿಯಾಗಿ ನಿವೃತ್ತ ನ್ಯಾಯವಾದಿ ಫಕ್ರುದ್ದೀನ್ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಫಕ್ರುದ್ದೀನ್ ಸೋನಿಯಾ ವಿರುದ್ಧ ಸ್ಪರ್ಧಿಸಲು ನಿರಾಕರಿಸಿ ಅಚ್ಚರಿ ಮೂಡಿಸಿದ್ದಾರೆ.ಸುದ್ದಿಯನ್ನು ದೃಢಪಡಿಸಿದ ಪಕ್ಷದ ಮೂಲಗಳು ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಮಾಜಿ ಹೈಕೋರ್ಟ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿರುವ ಫಕ್ರುದ್ದೀನ್ ಚುನಾವಣೆಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಪಕ್ಷ ಈಗ ಸಾಮಾಜಿಕ ಕಾರ್ಯಕರ್ತೆ ಅರ್ಚನಾ ಶ್ರೀವಾಸ್ತವರನ್ನು , ಸೋನಿಯಾ ಗಾಂಧಿ ವಿರುದ್ಧ ಆಖಾಡಕ್ಕಿಳಿಸಲು ನಿರ್ಧರಿಸಿದೆ.ಅಮೇಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಆಪ್ ಕವಿ ಪರಿವರ್ತಿತ ರಾಜಕಾರಣಿ ಕುಮಾರ್ ವಿಶ್ವಾಸ್‌ರವರನ್ನು ಕಣಕ್ಕಿಳಿಸಿದೆ.ಅಮೇಥಿಯಿಂದ ಬಿಜೆಪಿಯಿಂದ ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲ ಅಜಯ್ ಅಗರ್ವಾಲ್ ಸೋಮವಾರ ತನ್ನ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಮೊದಲಿನಿಂದಲೂ ಆಪ್ ಮತ್ತು ಕಾಂಗ್ರೆಸ್ ಚುನಾವಣಾ ಪೂರ್ವ ರಹಸ್ಯ ಮೈತ್ರಿ ಮಾಡಿಕೊಂಡಿವೆ ಎಂದು ಆರೋಪಿಸುತ್ತಾ ಬಂದಿದೆ. ಆಪ್ ನ ಕೆಲವು ನಡೆಗಳು ಕೂಡಾ ಈ ಆರೋಪಕ್ಕೆ ಪುಷ್ಠಿ ನೀಡುವಂತಿತ್ತು. ಇದೀಗ ನಡೆದಿರುವ ಬೆಳವಣಿಗೆ ಈ ಸಂಶಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

