ಉಳ್ಳಾಲ : ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ವೈದ್ಯರ ತಂಡ ಥೈಮಸ್ ಗ್ಲಾಂಡನ್ನು ಸಮಗ್ರ ಥೊರೆಸ್ಕೋಪಿಕ್ ಕೌಶಲ್ಯದ ಮೂಲಕ ತೆಗೆದು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಥೈಮಸ್ ಗ್ಲಾಂಡ್ ಎಂಬುದು ಎದೆಯ ಕೋಶದ ಮತ್ತು ದೊಡ್ಡ ರಕ್ತನಾಳಗಳ ಮೇಲ್ಮೈನಲ್ಲಿ ಕಂಡು ಬರುತ್ತದೆ. ಸಾಂಪ್ರದಾಯಕವಾಗಿ ಸ್ಟೆರೆನೋಟೊಮಿ ಶಸ್ತ್ರಚಿಕಿತ್ಸೆ ಮೂಲಕ ತೆರೆದ ಹೃದಯ ಶಸ್ತ್ರಚಿಕಿತ್ಸೆಯಂತೆ ಮಾಡುವುದು ವಾಡಿಕೆ. ಆದರೆ, ಥೊರೆಸ್ಕೋಪಿಕ್ ಥೈಮೆಕ್ಟೊಮಿ ಮೂಲಕ ಕೇವಲ ಮೂರು ಸಣ್ಣ ರಂಧ್ರಗಳನ್ನು ಮಾಡಿ ಅದರಲ್ಲೇ ಶಸ್ತ್ರಚಿಕಿತ್ಸೆ ಮಾಡುವಲ್ಲಿ ಮೈಯಸ್ತನಿಯ ಗ್ರಾವಿಸ್ ಎಂಬ ನರರೋಗಕ್ಕೆ ಸಂಬಂಧಪಟ್ಟ ಕಾಯಿಲೆಗೆ ನೀಡುವ ಸೂಕ್ತ ಚಿಕಿತ್ಸೆಯಾಗಿದೆ. ಅದರಲ್ಲೂ ಮಕ್ಕಳಿಗೆ ಮೂರು ದಿನಗಳವರೆಗೆ ಮಾತ್ರ ಆಸ್ಪತ್ರೆಯಲ್ಲಿ ಉಳಕೊಂಡು ಕಡಿಮೆ ನೋವು ಅನುಭವಿಸಿ, ಗುಣಮುಖರಾಗಿ, ಎದೆಯಲ್ಲಿ ಕುರುಹುಗಳೇನೂ ಉಳಿಯದಂತೆ ಮಾಡುವ ವಿನೂತನ ಕ್ರಮವಾಗಿದೆ. ಈ ತರಹದ ಎರಡು ಶಸ್ತ್ರಚಿಕಿತ್ಸೆಗಳನ್ನು ಕಳೆದ ತಿಂಗಳು ಕ್ಷೇಮ ಆಸ್ಪತ್ರೆಯ ಮಕ್ಕಳ ಶಸ್ತ್ರಚಿಕಿತ್ಸೆಯ ವಿಭಾಗದ ತಜ್ಞ ವೈದ್ಯರುಗಳಾದ ಡಾ. ಸಂದೀಪ್ ರೈ ಮತ್ತು ಡಾ. ರಘುಶಂಕರ್ ಅವರು ಯಶಸ್ವಿಯಾಗಿ ಮಾಡಿರುತ್ತಾರೆ. ಆ ಶಸ್ತ್ರಚಿಕಿತ್ಸೆಯನ್ನು ನರರೋಗ ವಿಭಾಗದ ಮುಖ್ಯಸ್ಥೆ
ಪ್ರೊಫೆಸರ್ ಡಾ. ಲೇಖಾ ಪಂಡಿತ್ ಮತ್ತು ನರರೋಗ ವಿಭಾಗದ ಸಲಹೆಗಾರ ಡಾ. ಶಾರೀಕ್ ಮುಸ್ತಫಾ ಅವರು ಪರಿಶೀಲಿಸಿರುತ್ತಾರೆ. ಅರಿವಳಿಕೆ ತಜ್ಞ ವೈದ್ಯರಾದ ಡಾ. ಶ್ರೀಪಾದ ಜಿ. ಮೆಹಂದಲೆ ಮತ್ತು ಡಾ. ನಿಖಿಲ್ ಎಮ್.ಪಿ. ಅವರು ತಂಡದಲ್ಲಿದ್ದರು.
