ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಗ್ರಾಮ ಪಂಚಾಯತ್‍ನಲ್ಲಿ ಕಳೆದ ಮೂರು ವರ್ಷಗಳಿಂದ ಅಧಿಕಾರ ದುರ್ಬಳಕೆ ಮಾಡಿಕೊಂಡು ಪಂಚಾಯತ್ ಅಭಿವೃದ್ಧಿಗೆ ಅಡ್ಡಿಯಾಗಿರುವ ಪಿಡಿಒ ಪಿ.ವೆಂಕಟೇಶ್ ಇವರನ್ನು ಕೂಡಲೇ ವರ್ಗಾಯಿಸಬೇಕು. ಇಲ್ಲದಿದ್ದಲ್ಲಿ ರಾಯಿ ಮತ್ತು ಕೊಯಿಲ ಗ್ರಾಮಸ್ಥರನ್ನು ಒಟ್ಟುಗೂಡಿಸಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ ಇಲ್ಲಿನ ಆಡಳಿತಾರೂಢ ಸದಸ್ಯರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ ಘಟನೆ ಶುಕ್ರವಾರ ನಡೆದಿದೆ.
17july pdo P.Venkatesh
ಕಳೆದ ವರ್ಷ ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೈತ್ರೋಡಿ ಕುಡಿಯುವ ನೀರಿನ ಪಂಪ್‍ಹೌಸ್‍ಗೆ ಇವರು ಏಕಾಯೇಕಿ ಬೀಗ ಜಡಿದ ಪರಿಣಾಮ ಸ್ಥಳೀಯ ನಾಗರಿಕರು ಆಕ್ರೋಶಗೊಂಡು ಪಂಚಾಯತ್‍ಗೆ ಮುತ್ತಿಗೆ ಹಾಕುವ ಮೂಲಕ ಆಡಳಿತಾರೂಢ ಸದಸ್ಯರಿಗೆ ಮುಜುಗರ ಉಂಟು ಮಾಡಲು ಪ್ರಯತ್ನಿಸಿದ್ದಾರೆ.
ಈ ಬಾರಿ ನಡೆದ ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಇವರು ವಿವಿಧ ಪತ್ರಿಕೆಗಳಿಗೆ ತಪ್ಪು ಮಾಹಿತಿ ನೀಡಿ , ರಾಜಕೀಯ ಪಕ್ಷವೊಂದರ ಪರ ಪತ್ರಿಕಾ ಹೇಳಿಕೆ ಕೊಟ್ಟು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಈ ಬಗ್ಗೆ ಈಗಾಗಲೇ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ.
ಈ ಪಂಚಾಯತ್‍ಗೆ ವಿವಿಧ ಅರ್ಜಿ ಮತ್ತು ದೂರು ಸಲ್ಲಿಸಲು ಬರುವ ಬಡ ನಾಗರಿಕರಲ್ಲಿ ದರ್ಪದಿಂದ ವರ್ತಿಸಿ ಹಣಕ್ಕಾಗಿ ಪೀಡಿಸುವುದರ ಜೊತೆಗೆ ಇಲ್ಲಿನ ಮಹಿಳಾ ಸಿಬ್ಬಂದಿಗಳೊಡನೆ ಅನುಚಿತವಾಗಿ ವರ್ತಿಸುತ್ತಿದ್ದಾರೆ.
ಪ್ರತಿದಿನ ಪಂಚಾಯತ್‍ನಲ್ಲಿ ಕರ್ತವ್ಯಕ್ಕೆ ಹಾಜರಾಗದೆ ವಾರಕ್ಕೊಮ್ಮೆ ಬಂದು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿಕೊಂಡು ರಾಜಕೀಯ ಪಕ್ಷವೊಂದರ ದಲ್ಲಾಳಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕಳೆದ ಮೂರು ಅವಧಿಯಲ್ಲಿ ಆಡಳಿತ ನಡೆಸುತ್ತಿರುವ ಇಲ್ಲಿನ ಸದಸ್ಯರನ್ನು ಕಡೆಗಣಿಸಿ ಅಗೌರವ ತೋರಿಸುತ್ತಿದ್ದು, ಪಂಚಾಯತ್ ಅಭಿವೃದ್ಧಿಗೆ ವಿರುದ್ಧವಾಗಿ ವರ್ತಿಸುತ್ತಿರುವ ಇವರನ್ನು ಕೂಡಲೇ ವರ್ಗಾಯಿಸಬೇಕು ಎಂದು ಆಗ್ರಹಿಸಿದ್ದಾರೆ. ಈಗಾಗಲೇ ಇವರನ್ನು ವರ್ಗಾಯಿಸುವಂತೆ ಪದೇ ಪದೇ ಆಗ್ರಹಿಸುತ್ತಿರುವ ರಾಯಿ ಮತ್ತು ಕೊಯಿಲ ಗ್ರಾಮಸ್ಥರನ್ನು ಒಟ್ಟುಗೂಡಿಸಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ ಮತ್ತಿತರ ಎಂಟು ಮಂದಿ ಸದಸ್ಯರು ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಮತ್ತು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಲ್ಲಿಸಿದ ಲಿಖಿತ ದೂರಿನಲ್ಲಿ ವಿವರಿಸಿದ್ದಾರೆ.

By Suddi9

Leave a Reply

Your email address will not be published. Required fields are marked *