ಬಂಟ್ವಾಳ:ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ನಾಡು ಗ್ರಾಮೀಣ ಪ್ರದೇಶದಲ್ಲಿ ಈಚೆಗೆ ಆರಂಭಗೊಂಡ ಕೆನರಾ ಬ್ಯಾಂಕಿನ ಹವಾನಿಯಂತ್ರಿತ ಶಾಖೆಯು ಈಗಾಗಲೇ ತಾಲ್ಲೂಕಿನಲ್ಲಿ ಗರಿಷ್ಟ ಖಾತೆ ತೆರೆದು ಕೋಟಿಗೂ ಮಿಕ್ಕಿ ವ್ಯವಹಾರ ನಡೆಸುವ ಮೂಲಕ ಜನಮೆಚ್ಚುಗೆ ಗಳಿಸಿದೆ.

ಇದೀಗ ಇಲ್ಲಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೀರಾ ಹಿಂದುಳಿದ ಕುರಿಯಾಳ ಗ್ರಾಮವನ್ನು ಕೆನರಾ ಬ್ಯಾಂಕಿನ ವತಿಯಿಂದ ದತ್ತು ಸ್ವೀಕರಸಿಸಲು ಮುಂದಾಗಿದೆ.
ಇದೇ 12ರಂದು ಬೆಳಿಗ್ಗೆ ‘ದತ್ತು ಸ್ವೀಕಾರ’ ಕಾರ್ಯಕ್ರಮವು ಸೋರ್ಣಾಡು ಶಾಖಾ ಕಟ್ಟಡದಲ್ಲಿ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಬ್ಯಾಂಕಿನ ಹಿರಿಯ ಅಧಿಕಾರಿಗಳು ಮತ್ತಿತರ ಗಣ್ಯರು ಭಾಗವಹಿಸುವರು.
ಕುರಿಯಾಳ ಗ್ರಾಮದಲ್ಲಿ ಒಟ್ಟು 2,334 ಮಂದಿ ಜನಸಂಖ್ಯೆ ಹೊಂದಿದ್ದು, ಈ ಪೈಕಿ 1,132 ಮಂದಿ ಪುರುಷರು ಮತ್ತು 1,202 ಮಂದಿ ಮಹಿಳೆಯರು. ಇಲ್ಲಿನ ಕುರಿಯಾಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಉಚಿತ ಕಂಪ್ಯೂಟರ್ ಮತ್ತಿತರ ಮೂಲಭೂತ ಸೌಲಭ್ಯ ನೀಡುವುದರ ಜೊತೆಗೆ ಸಾರ್ವಜನಿಕ ಬಸ್ ನಿಲ್ದಾಣ ನಿರ್ಮಾಣ, ದಾರಿದೀಪ ಅಳವಡಿಕೆ ಮತ್ತಿತರ ಜನಪರ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಅಮ್ಟಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರೀಶ ಶೆಟ್ಟಿ ನೇತೃತ್ವದಲ್ಲಿ ರಸ್ತೆ ದುರಸ್ತಿಗೆ ನೂರಾರು ಮಂದಿ ಯುವಕರ ತಂಡವು ಶ್ರಮದಾನ ನಡೆಸಲು ಮುಂದಾಗಿದೆ ಎಂದು ಬ್ಯಾಂಕಿನ ಶಾಖಾಧಿಕಾರಿ ಎಸ್.ರಮೇಶ್ ನಾಯ್ಕ್ ತಿಳಿಸಿದ್ದಾರೆ
