ಕೈಕಂಬ: ತೆಂಕ ಎಡಪದವು ಸಮೀಪದ ಕಣ್ಣೂರಿ ಎಂಬಲ್ಲಿನ ನಿವಾಸಿ ಕುಷ್ಟಪ್ಪ ಗೌಡ ಅವರ ಹಟ್ಟಿಗೆ ನುಗ್ಗಿ ಐದು ಹಸುಗಳನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ಮುಗಿಲುಮುಟ್ಟಿದೆ.

ಘಟನೆಗೆ ಸ್ಪಂದಿಸಿದ ಬಜರಂಗದಳ ನೊಂದ ಕುಟುಂಬಕ್ಕೆ ಮೂರು ದನಗಳನ್ನು ದಾನವಾಗಿ ನೀಡಲು ಮುಂದಾಗಿದೆ. ಮೂರು ಹಸುಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು ಜಲೈ 9ರಂದು ಹಸ್ತಾಂತರ ನಡೆಸಲಿದೆ
ಅಷ್ಟಕ್ಕೂ ಹಟ್ಟಿಗೆ ನುಗ್ಗಿ ಬೆಂಕಿ ಹಚ್ಚಿದವರ್ಯಾರು ಎಂಬ ಬಗ್ಗೆ ಕುತೂಹಲ ನೆಟ್ಟಿದ್ದು, ಸಾಕಷ್ಟು ನಿಗೂಢತೆ ಸೃಷ್ಟಿಸಿದೆ.
ಸ್ಥಳೀಯರ ಪ್ರಕಾರ ಹಟ್ಟಿಗೆ ನುಗ್ಗಿದ ಗೋಕಳ್ಳರು ಹಸುಗಳ್ಳತನ ನಡೆಸಲು ವಿಫಲರಾಗಿ ಅಸಹಾಯಕತೆಯಿಂದ ಹಸುಗಳ ಹೊಟ್ಟೆಗೆ ಹಾಗೂ ಪಕ್ಕದಲ್ಲಿಡಲಾಗಿದ್ದ ಕಟ್ಟಿಗೆಗೆ ಪೆಟ್ರೋಲ್ ಸುರಿಸಿ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸುತ್ತಿದ್ದಾರೆ.
ಈ ಭಾಗದಲ್ಲಿ ಹಲವಾರು ಮಂದಿ ಜನುವಾರು ಸಾಕಾಣಿಕೆ ನಡೆಸುತ್ತಿದ್ದಾರೆ. ಅಲ್ಲದೆ ಹಲವಾರು ಹಸುಗಳು ಕಳ್ಳರ ಪಾಲಾಗಿದ್ದು, ಮನೆಯವರು ಮತ್ತೆ ಗೋಸಾಕದಂತೆ ಭಯಹುಟ್ಟಿಸುವ ಸಲುವಾಗಿ ಹಸುಗಳನ್ನು ಜೀವಂತವಾಗಿ ದಹಿಸಿರಬಹುದೆನ್ನಲಾಗುತ್ತಿದೆ.
ಶ್ರೀರಾಮ ಸೇನೆ ಪ್ರತಿಭಟನೆಗೆ ಸಿದ್ಧತೆ
ಘಟನೆಯನ್ನು ತೀವ್ರವಗಿ ಖಂಡಿಸಿರುವ ಶ್ರೀರಾಮ ಸೇನೆ ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
