ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಾದ್ಯಂತ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಗ್ರಾಮೀಣ ಪ್ರದೇಶದಲ್ಲಿ ಕಾಣಿಸಿಕೊಂಡ ಡೆಂಗೆ ಜ್ವರಬಾಧೆ ಕ್ರಮೇಣ ನಗರ ಪ್ರದೇಶವನ್ನೂ ಆಕ್ರಮಿಸಿಕೊಂಡ ಪರಿಣಾಮ ಈಗಾಗಲೇ ಸುಮಾರು 150ಕ್ಕೂ ಮಿಕ್ಕಿ ಮಂದಿ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚದ ಚಿಕಿತ್ಸೆ ಪಡೆದು ಸೂಕ್ತ ಚಿಕಿತ್ಸಾ ಸೌಲಭ್ಯ ಇಲ್ಲದಿರುವ ಸರ್ಕಾರಿ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಗುರುವಾರ ಬಿ.ಸಿ.ರೋಡ್ ನಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯಸಭೆಯಲ್ಲಿಯೂ ನುಸಿ ಕಾಟ ಮತ್ತು ಫಾಗಿಂಗ್ ಹೀಗೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

3btl-milk dairy

3btl-anganvady
3btl-bogody
ಒಂದು ಊರಿನ ಸ್ಥಿತಿಗತಿ ಅಳೆಯಲು ಅಲ್ಲಿನ ಶಾಲೆ ಮತ್ತು ದೇವಾಲಯಗಳು ಸಾಕಾಗುತ್ತದೆ ಎಂಬುದು ಹಿರಿಯರ ಮಾತು. ಅದೇ ರೀತಿ ಬಂಟ್ವಾಳ ತಾಲ್ಲೂಕಿನಲ್ಲಿ ಒಟ್ಟು 565 ಅಂಗನವಾಡಿ ಕೇಂದ್ರಗಳನ್ನು ಆರಂಭಿಸುವ ಮೂಲಕ ರಾಜ್ಯದಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿರುವುದೂ ಸತ್ಯ.
ಆದರೆ ಇಲ್ಲಿನ 200ಕ್ಕೂ ಮಿಕ್ಕಿ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ ದೊರಕಿಸಿ ಕೊಡಲು ಇಲ್ಲಿನ ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಇನ್ನೂ ಸಾಧ್ಯವಾಗಿಲ್ಲ ಎಂಬುದು ಅಚ್ಚರಿಯಾದರೂ ಸತ್ಯ ಎನ್ನುತ್ತಿದ್ದಾರೆ ಇಲ್ಲಿನ ಪುಟಾಣಿ ಮಕ್ಕಳ ಹೆತ್ತವರು. ಇದರಿಂದಾಗಿ ಕೆಲವೆಡೆ ಸೂಕ್ತ ಕಟ್ಟಡವಿಲ್ಲದೆ ಬಾಡಿಗೆ ಕಟ್ಟಡ, ಎರವಲು ಕಟ್ಟಡ, ಶಾಲೆ, ಹಾಲಿನ ಡೈರಿ ಹೀಗೆ ಸೊಳ್ಳೆ ಕಾಟ ಮತ್ತು ಬಯಲು ಶೌಚಾಲಯದಿಂದ ಮಕ್ಕಳಿಗೆ ‘ಡೆಂಗೆ ಭೀತಿ’ ಎದುರಾಗಿದೆ.
ತಾಲ್ಲೂಕಿನಲ್ಲಿ ಒಟ್ಟು 21,630 ಮಂದಿ (1ರಿಂದ 3ವರ್ಷದೊಳಗಿನ) ಪುಟಾಣಿಗಳು ಅಂಗನವಾಡಿ ಕೇಂದ್ರದಲ್ಲಿ ಇದ್ದಾರೆ ಎನ್ನುವುದು ಇಲಾಖೆ ಲೆಕ್ಕಾಚಾರ. ಹೀಗಾಗಿ ಕಳೆದ ವರ್ಷವಷ್ಟೇ ಬಂಟ್ವಾಳ ಮತ್ತು ವಿಟ್ಲ ವಿಭಾಗವಾಗಿ ಪ್ರತ್ಯೇಕಗೊಂಡು ಒಂದು ಸ್ಥಾನಕ್ಕೆ ಬದಲಾಗಿ ಇಬ್ಬರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇದ್ದಾರೆ. ಬಂಟ್ವಾಳ ವ್ಯಾಪ್ತಿಯಲ್ಲಿ ಮಲ್ಲಿಕಾ ಮತ್ತು ವಿಟ್ಲ ವಿಭಾಗಕ್ಕೆ ಸುಧಾ ಜೋಷಿ ಇವರು ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಂಟ್ವಾಳ ವಿಭಾಗದಲ್ಲಿ ಪ್ರಸಕ್ತ 342 ಅಂಗನವಾಡಿ ಕೇಂದ್ರಗಳ ಪೈಕಿ ಕೇವಲ 301 ಅಂಗನವಾಡಿ ಕೇಂದ್ರಗಳಿಗೆ ಮಾತ್ರ ಸ್ವಂತ ಕಟ್ಟಡ ಇದೆ. ಉಳಿದಂತೆ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ-5, ಸಮುದಾಯ ಕಟ್ಟಡ-18, ಯುವಕ ಮಂಡಲ-7, ಮಹಿಳಾ ಮಂಡಲ-2, ಶಾಲೆ-8 ಹೀಗೆ ಕಾರ್ಯನಿರ್ವಹಿಸುತ್ತಿದೆ.
ರಾಯಿ ಪೇಟೆಯಲ್ಲಿ ಅಂಗನವಾಡಿ ಕೇಂದ್ರ ಕಟ್ಟಡವು ಸುವರ್ಣ ಗ್ರಾಮ ಯೋಜನೆಯಡಿ ಮಂಜೂರಾದ ರೂ 3ಲಕ್ಷ ವೆಚ್ಚದಲ್ಲಿ ಕಳೆದ ಆರು ತಿಂಗಳ ಹಿಂದೆಯಷ್ಟೇ ಪುನರ್ ನಿರ್ಮಾಣಗೊಂಡಿದ್ದರೂ, ಕೆಲವೊಂದು ‘ರಾಜಕೀಯ’ ಕಾರಣಗಳಿಂದ ಇಲ್ಲಿನ ಪುಟಾಣಿ ಮಕ್ಕಳು ಮಾತ್ರ ಇನ್ನೂ ಸ್ಥಳೀಯ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ಪಶು ಆಹಾರ ಸಂಗ್ರಹಣಾ ಕೊಠಡಿ ಬಳಿ ಉಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಗ್ರಾಮಭೇಟಿ ಕಾರ್ಯಕ್ರಮ ಸಂದರ್ಭದಲ್ಲಿ ಹೊಸ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ತರಾತುರಿಯಲ್ಲಿ ಸಜ್ಜುಗೊಳಿಸಿದ್ದರೂ ಬಳಿಕ ಅದು ರದ್ದುಗೊಂಡಿತ್ತು. ಇದೀಗ ಇಲ್ಲಿನ ಅಂಗನವಾಡಿ ಕಾರ್ಯಕತರ್ೆ ಡೆಂಗೆ ಜ್ವರಬಾಧೆಯಿಂದ ಬಳಲುತ್ತಿರುವುದು ಇಲ್ಲಿನ ಮಕ್ಕಳ ಹೆತ್ತವರನ್ನು ಕಂಗೆಡಿಸಿದೆ.
ಇನ್ನೊಂದೆಡೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗುಡ್ಡೆ ಅಂಗಡಿ ಅಂಗನವಾಡಿ ಕೇಂದ್ರವು ಬೋಗೋಡಿ ಎಂಬಲ್ಲಿ ಸಿಮೆಂಟ್ ಶೀಟು ಅಳವಡಿಸಿದ ಪುಟ್ಟ ಗೋದಾಮು ಮಾದರಿ ಅಂಗನವಾಡಿ ಕೇಂದ್ರದಲ್ಲಿ ಸೂಕ್ತ ಶೌಚಾಲಯವೂ ಇಲ್ಲದೆ ಮಕ್ಕಳಿಗೆ ಮಳೆ-ಬಿಸಿಲೆನ್ನದೆ ಬಯಲು ಶೌಚಾಲಯವೇ ಗತಿಯಾಗಿದೆ ಎಂಬುದು ಇಲ್ಲಿನ ಮಕ್ಕಳ ಪೋಷಕರ ಅಳಲು.
ಈ ನಡುವೆ ಪ್ರತೀ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿ ಗಳು ಮತ್ತು ಕಾರ್ಯಕರ್ತೆ ಯರು ಹಾಗೂ ಸಹಾಯಕಿಯರ ಹಾಜರಾತಿ ಜೊತೆಗೆ ಆಹಾರ ಸಾಮಾಗ್ರಿ ಪರಿಶೀಲನೆಗೆ 10ಕ್ಕೂ ಮಿಕ್ಕಿ ಮಂದಿ ಮೇಲ್ವಿಚಾರಕರಿದ್ದಾರೆ.
ಒಟ್ಟಿನಲ್ಲಿ ಬಯಲು ಶೌಚಾಲಯ ವೇಳೆ ಮಕ್ಕಳಿಗೆ ಹಾವು, ಚೇಳು ಕಾಟವೂ ಕಂಡು ಬರುತ್ತಿದ್ದು, ತಾಲ್ಲೂಕಿನಲ್ಲಿ ಕಣ್ಣು ನೋವು ಮತ್ತು ಡೆಂಗೆಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಪುಟಾಣಿ ಮಕ್ಕಳ ಪೋಷಕರನ್ನು ಆತಂಕಕ್ಕೀಡು ಮಾಡಿದೆ.

By Suddi9

Leave a Reply

Your email address will not be published. Required fields are marked *