ಯಾವುದೇ ತುರ್ತ್ ಸಂದರ್ಭದಲ್ಲಿ ನಾನಾ ರಕ್ಷಣೆ ಇಲಾಖೆಗಳ ಖಾಲಿ ಜಾಗಗಳನ್ನು ಭರ್ತಿ ಮಾಡಲು ಇವರೇ ಬೇಕು. ಮಂತ್ರಿ-ಮಾಗಧರ ಕಾರ್ಯಕ್ರಮದಲ್ಲಿ ರಕ್ಷಕರಾಗಿಯೂ ಇವರೇ ಬೇಕು. ಜನಸಾಮಾನ್ಯರಿಂದ ಹಿಡಿದು ಮೇಲಿನ ಹಂತದವರೆಗಿನ ಎಲ್ಲರ ರಕ್ಷಣೆಯಲ್ಲಿ, ಭದ್ರತೆ ಒದಗಿಸುವಲ್ಲಿ ಒಂದಲ್ಲೊಂದು ವಿಧದಲ್ಲಿ ಇವರ ನೆರವು ಬೇಕು. ಇವರ ಹೆಸರೇ ಹೋಂಗಾರ್ಡ್ ಗೃಹರಕ್ಷಕ ದಳದವರು. ಆದರೆ ರಕ್ಷಣೆಯ ಹೊಣೆ ಹೊತ್ತ ಇವರಿಗೆ ಮಾತ್ರ ಯಾವುದೇ ರೀತಿಯ ರಕ್ಷಣೆ ಇಲ್ಲ. ದೇಶ ಕಾಯುವ ಶಿಸ್ತಿನ ಸೈನಿಕರಂತೆ ನಾನಾ ಇಲಾಖೆಗಳೊಂದಿಗಿದ್ದು ರಾತ್ರಿ ಹಗಲೆನ್ನದೇ ದುಡಿದರೂ ಇವರಿಗೆ ಮಾತ್ರ ಇತರ ಇಲಾಖೆಗಳ ಸಿಬ್ಬಂದಿಗಳಿಗೆ ಸಿಗುವ ಯಾವುದೇ ಸರಕಾರಿ ಸೌಲಭ್ಯಗಳು ಸಿಗುತ್ತಿಲ್ಲ……ಮುಂದಿನ ದಿನಗಳಲ್ಲಿ ಇವರೂ ತಮ್ಮ ರಕ್ಷಣೆಗಾಗಿ ಹೋರಾಟಕ್ಕಿಳಿದರೆ ಅದು ಇವರ ತಪ್ಪಲ್ಲ. ನಮ್ಮ ವ್ಯವಸ್ಥೆಯ ದೋಷವಷ್ಟೇ.

ಒಂದು ಲೆಕ್ಕಾಚಾರದಂತೆ ರಾಜ್ಯದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ಗೃಹರಕ್ಷಕ ದಳದಲ್ಲಿ ಸದಸ್ಯರಾಗಿ ತೊಡಗಿಸಿಕೊಂಡಿದ್ದಾರೆ. ನೆಲ, ಜಲ, ಮನುಕುಲ ಕಾಯುವ ಪವಿತ್ರವಾದ, ಶ್ರೇಷ್ಠವಾದ ಕಾರ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತಾ ಬರುತ್ತಿದ್ದಾರೆ. ತುರ್ತ್ ಸಂದರ್ಭದಲ್ಲಿ ಯಾವುದೇ ಸ್ಥಳಕ್ಕೂ ಧಾವಿಸಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ತನ್ನ ಪ್ರಾಣದ ಆಸೆಯನ್ನೂ ತೊರೆದು ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುವ ಗೃಹರಕ್ಷಕ ದಳದವರ ಬಗ್ಗೆ ನಾವು ಒಂದಷ್ಟು ಯೋಚಿಸಲೇಬೇಕು. ಅವರಿಗೆ ನಿಜಕ್ಕೂ ಶಹಬ್ಬಾಸ್ ಎನ್ನಲೇಬೇಕು.
ದೇಶ ಸೇವೆಯೆಂದೋ, ಸಮಾಜ ಸೇವೆಯೆಂದೋ, ಇಲ್ಲವೇ ಹೊಟ್ಟೆಪಾಡಿಗೆ ಒಂದು ಉದ್ಯೋಗ ಇರಲೆಂದೋ ಅನೇಕ ಮಂದಿ ಗೃಹರಕ್ಷಕ ದಳಕ್ಕೆ ಸೇರುತ್ತಾರೆ. ಕೆಲವರು ಇತರ ಉದ್ಯೋಗದ ಮದ್ಯೆ ಪಾರ್ಟ್ ಟೈಮ್ ಉದ್ಯೋಗವಾಗಿಯೂ ಇದರಲ್ಲಿ ತೊಡಗಿಸಿಕೊಂಡವರಿದ್ದರೆ ಬಹುತೇಕ ಮಂದಿ ಇದನ್ನೇ ಪೂರ್ಣಕಾಲಿಕ ಉದ್ಯೋಗವಾಗಿ ಸ್ವೀಕರಿಸಿ ಇದರಲ್ಲೇ ಬದುಕನ್ನು ಕಟ್ಟಿಕೊಂಡವರಿದ್ದಾರೆ. ದ.ಕ.ಜಿಲ್ಲೆಯಲ್ಲಿ 800ಕ್ಕೂ ಹೆಚ್ಚು ಗೃಹರಕ್ಷಕ ಸದಸ್ಯರಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಸಹಿತ ರಾಷ್ಟ್ರೀಯ, ರಾಜ್ಯಮಟ್ಟದ ದಿನಾಚರಣೆ ಸಂದರ್ಭದ ಮೆರವಣಿಗೆ, ಪೆರೇಡ್ಗಳಲ್ಲಿ ಶಿಸ್ತಿನ ಸೈನಿಕರಾಗಿ ಇವರು ಹೆಜ್ಜೆ ಹಾಕುತ್ತಾರೆ. ಬಹುತೇಕರಿಗೆ ಇವರ ನೆನಪಾಗುವುದು ಇಂತಹ ಸಂದರ್ಭಗಳಲ್ಲೇ. ಮತ್ತೆ ಅವರನ್ನು ಮರೆತು ಬಿಡುತ್ತಾರೆ.
ನಿಯಾಮಾವಳಿಯಂತೆ ಅರ್ಜಿ ಸಲ್ಲಿಸಿ ಗೃಹ ರಕ್ಷಕ ದಳಕ್ಕೆ ಸೇರುವ ಇವರ ಪೈಕಿ ಕೆಲವರು ಕಡಿಮೆ ಶಿಕ್ಷಣ ಪಡೆದವರಾದರೆ ಕೆಲವರು ಪಧವೀದರರು ಇದ್ದಾರೆ. ಎರಡು ಮೂರು ದಶಕಕ್ಕೂ ಹೆಚ್ಚು ಕಾಲ ಇಲ್ಲೇ ಸೇವೆ ಸಲ್ಲಿಸಿದವರೂ ಇದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಇದರಲ್ಲಿ ಮಹಿಳೆಯರೂ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ರಕ್ಷಣೆ ಸಂಬಂಧಿತ ನಾನಾ ಇಲಾಖೆಗಳಲ್ಲಿ ಹುದ್ದೆ ಖಾಲಿ ಇದ್ದಾಗ ತಾತ್ಕಾಲಿಕ ನೆಲೆಯಲ್ಲಿ ನಿಯೋಜನೆಗೊಂಡು ಅಲ್ಲಿ ಅದೇ ಇಲಾಖಾ ಸಿಬ್ಬಂದಿಗಳಂತೆ ಕರ್ತವ್ಯ ನಿರ್ವಹಿಸುತ್ತಾರೆ. ಅದೇ ಇಲಾಖೆಯ ಕರ್ತವ್ಯದಲ್ಲಿ ತರಬೇತಿ ಪಡೆಯುತ್ತಾ ಪರಿಣಿತರಾಗುತ್ತಾರೆ. ಆದರೆ ನಿರ್ದಿಷ್ಠ ಇಲಾಖೆಯ ಖಾಲಿ ಹುದ್ದೆ ಭರ್ತಿ ಗೊಂಡಾಗ ಇವರು ಅಲ್ಲಿಂದ ಬಿಡುಗಡೆಗೊಳ್ಳುತ್ತಾರೆ.
ತುರ್ತು ಸಂದರ್ಭಗಳಲ್ಲಿ:
ಪೋಲೀಸ್ ಇಲಾಖೆ, ಅಗ್ನಿಶಾಮಕ ದಳ, ಅಬಕಾರಿ ಇಲಾಖೆ ಸಹಿತ ಅನೇಕ ಇಲಾಖೆಗಳು ಇವರ ಸೇವೆಯನ್ನು ಬಳಸಿಕೊಳ್ಳುತ್ತದೆ. ಪ್ರಾಕೃತಿಕ ವಿಕೋಪ, ನೆರೆ ಹಾವಳಿ, ಬೆಂಕಿ ಆಕಸ್ಮಿಕ ಮೊದಲಾದ ದುರಂತಗಳ ಸಂದರ್ಭಗಳಲ್ಲಿ ಇವರ ಸೇವೆಯನ್ನು ಪಡೆಯಲಾಗುತ್ತಿದೆ. ಎಲ್ಲಿದ್ದರೂ ಅವಘಡ ಸಂದರ್ಭ ತುರ್ತು ಕರೆಯ ಮೇರೆಗೆ ಹಾಜರಾಗುವ ಇವರ ತಂಡ ಆಯಾಯ ಇಲಾಖೆಗಳೊಡನಿದ್ದು ರಕ್ಷಣೆಯ ಕಾರ್ಯದಲ್ಲಿ ಅವಿರತ ಶ್ರಮ ನೀಡುತ್ತಿದೆ. ಟ್ರಾಫಿಕ್ ಜಾಮ್ ಸಮಸ್ಯೆ ನಿಯಂತ್ರಣ, ಮಂತ್ರಿ ಮಾಗಧರ ಭದ್ರತೆ, ದೊಡ್ಡ ಮಟ್ಟದ ಸಭೆ ಸಮಾರಂಭಗಳ ಯಶಸ್ವಿ ನಿರ್ವಹಣೆಯಲ್ಲೂ ಇವರ ಪಾತ್ರ ಮಹತ್ವದ್ದಾಗಿದೆ.
ವೇತನ ರೂ.250 ಮಾತ್ರ:
ಇಷ್ಟೆಲ್ಲಾ ರೀತಿಯಲ್ಲಿ ಸೇವೆ ಸಲ್ಲಿಸುವ ಗೃಹರಕ್ಷಕ ದಳದವರಿಗೆ ಸಿಗುವ ದಿನ ವೇತನ ಕೇವಲ 250 ರೂಪಾಯಿ ಮಾತ್ರ. ಇವರಿಂದ ಸೇವೆ, ರಕ್ಷಣೆ ಪಡೆಯುವ ಹಿರಿಯ ಅಧಿಕಾರಿಗಳು ಮತ್ತು ಮಂತ್ರಿಗಳು ಗಂಟೆಗೆ ಸಾವಿರ, ಲಕ್ಷದಲ್ಲಿ ಎಣಿಸುವಾಗ ಮಳೆ ಬಿಸಿಲೆನ್ನದೇ ರಸ್ತೆಯಂಚಿನಲ್ಲಿ ನಿಂತು ರಕ್ಷಣೆ ಒದಗಿಸುವ ರಕ್ಷಕರ ಬದುಕಿಗೆ ಆಥರ್ಿಕ ಸ್ವಾವಲಂಬನೆ ನೀಡದ ನಮ್ಮ ವ್ಯವಸ್ಥೆಗೆ ಏನೆನ್ನಬೇಕೋ?
ಕಚೇರಿ ಇದೆ, ಸೌಲಭ್ಯಗಳಿಲ್ಲ:
ಗೃಹ ರಕ್ಷಕ ದಳದವರಿಗೆಂದೇ ಪ್ರತೀ ತಾಲೂಕಿನಲ್ಲೂ ಕಚೇರಿ ಇದೆ. ಬಿ.ಸಿ.ರೋಡಿನ ಹಳೆಯ ತಾಲೂಕು ಪಂಚಾಯತು ಕಟ್ಟಡದ ಮೂಲೆಯೊಂದರ ಕೊಠಡಿ ಬಂಟ್ವಾಳ ತಾಲೂಕಿನ ಗೃಹ ರಕ್ಷಕ ದಳದವರ ಕಚೇರಿಯಾಗಿದ್ದು ಹೇಳಲಿಕ್ಕಷ್ಟೇ ಇದು ಕಚೇರಿಯಾದರೂ ಇಲ್ಲಿ ಯಾವುದೇ ರೀತಿಯ ಸೌಲಭ್ಯಗಳಿಲ್ಲ. ಖಾಕಿ ಧರಿಸಿದ ಶಿಸ್ತಿನ ಸಿಪಾಯಿಗಳಿಗೆ ಅವ್ಯವಸ್ಥಿತ ಕಚೇರಿ, ಆದರೆ ಹೇಳವವರಿಲ್ಲ. ಕೇಳುವವರಿಲ್ಲ.
ಸೌಲಭ್ಯಗಳೂ ಇಲ್ಲ:
ಎಲ್ಲಾ ರೀತಿಯ ರಕ್ಷಣಾ ಕರ್ತವ್ಯಗಳನ್ನು ಇತರ ಇಲಾಖಾ ಸಿಬ್ಬಂದಿಗಳಂತೆ ಚಾಚೂ ತಪ್ಪದೆ ನಿರ್ವಹಿಸುವ ಗೃಹರಕ್ಷಕ ದಳದವರಿಗೆ ಯಾವುದೇ ರೀತಿಯ ಸರಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಯಾವುದೇ ರೀತಿಯ ರಕ್ಷಣೆ, ಜೀವನ ಭದ್ರತೆಗಳು ದೊರೆಯುತ್ತಿಲ್ಲ. ತಮ್ಮನ್ನೂ ಇತರ ಇಲಾಖಾ ಸಿಬ್ಬಂದಿಗಳಂತೆ ಖಾಯಂಗೊಳಿಸಿ ಸೂಕ್ತ ವೇತನ ಸಹಿತ ಸರಕಾರಿ ಸೌಲಭ್ಯಗಳನ್ನು ಒದಗಿಸಬೇಕು ಎಂದು ಗೃಹರಕ್ಷಕ ದಳದವರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಅದ್ದರಿಂದ ಇವರು ಸಂಘಟಿತರಾಗಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗಿಳಿಯುವ ದಿನ ದೂರವಿಲ್ಲ.
ಹೀಗೆ ಇವರು ಇಲ್ಲಗಳ ನಡುವೆಯೇ ಬದುಕು ಸಾಗಿಸುವವರು. ಕರೆದಾಗ ರೆಡಿ ಇರುವವರು. ರಕ್ಷಣೆಯ ಕಾರ್ಯದಲ್ಲಿ ನೆರವಾಗುವವರು. ಆದರೆ ಇವರನ್ನು ರಕ್ಷಿಸಬೇಕಾದವರು ಯಾರು?
ಎಲ್ಲಾ ರೀತಿಯ ರಕ್ಷಣಾ ಕರ್ತವ್ಯಗಳನ್ನು ಇತರ ಇಲಾಖಾ ಸಿಬ್ಬಂದಿಗಳಂತೆ ಚಾಚೂ ತಪ್ಪದೆ ನಿರ್ವಹಿಸುವ ಗೃಹರಕ್ಷಕ ದಳದವರಿಗೆ ಯಾವುದೇ ರೀತಿಯ ಸರಕಾರಿ ಸೌಲಭ್ಯಗಳು ಸಿಗುತ್ತಿಲ್ಲ. ಯಾವುದೇ ರೀತಿಯ ರಕ್ಷಣೆ, ಜೀವನ ಭದ್ರತೆಗಳು ದೊರೆಯುತ್ತಿಲ್ಲ. ತಮ್ಮನ್ನೂ ಇತರ ಇಲಾಖಾ ಸಿಬ್ಬಂದಿಗಳಂತೆ ಖಾಯಂಗೊಳಿಸಿ ಸೂಕ್ತ ವೇತನ ಸಹಿತ ಸರಕಾರಿ ಸೌಲಭ್ಯಗಳನ್ನು ಒದಗಿಸಬೇಕು-ಜಯಗಣೇಶ್ ದಾಸಕೋಡಿ, ಸಂತೋಷ್ ಕುಲಾಲ್ ಅಮ್ಟಾಡಿ ( ಗೃಹರಕ್ಷಕ ದಳದ ಸದಸ್ಯರು)
ಗೋಪಾಲ ಅಂಚನ್
