ಬಂಟ್ವಾಳ: ಶಾಲಾ-ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿ ಇಲಾಖೆಗಳಿಂದ ಸಮರ್ಪಕ ಮಾಹಿತಿ ಸಿಗುತ್ತಿಲ್ಲ, ಮಾಹಿತಿ ಕೊರತೆಯಿಂದಾಗಿ ಆಧಾರ್-ಆದಾಯ ಪ್ರಮಾಣ ಪತ್ರ ಅಗತ್ಯವಾಗಿ ಬೇಕು ಎನ್ನುವ ಕಾರಣಕ್ಕೆ ಸಾರ್ವಜನಿಕರು ತಾಲೂಕು ಕಛೇರಿಯಲ್ಲಿ ಮುಗಿ ಬೀಳುತ್ತಿದ್ದು ಅನಗತ್ಯ ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಆರೋಪಿಸಿ ಗುರುವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಭೆಯಲ್ಲಿ ಸದಸ್ಯರು ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ತಾ.ಪಂ.ಅಧ್ಯಕ್ಷ ಯಶವಂತ ದೇರಾಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಈ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಪತ್ರಿಕೆಗಳಲ್ಲಿ ಬಂದಿರುವ ತಾ.ಕಛೇರಿ ನೂಕುನುಗ್ಗಲು ವಿಚಾರದ ಚರ್ಚೆ ವೇಳೆ , ಇದಕ್ಕೆ ಸ್ಪಷ್ಣಣೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಯವರು, ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿ ಬಿಪಿಎಲ್ ಪಡಿತರ ಸಾಕಾಗುತ್ತದೆ, ಎಪಿಎಲ್ ಆಗಿದ್ದರೆ 1ಲಕ್ಷಕ್ಕಿಂತ ಕಡಿಮೆ ಆದಾಯವಿದ್ದರೆ ಅದಕ್ಕೆ ಪೂರಕ ಪ್ರಮಾಣ ಪತ್ರ ಅಗತ್ಯವಿದೆ ಎಂದರು.
ಆದರೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗ ಇಲಾಖಾ ಅಧಿಕಾರಿಗಳು, ಆದಾಯ ಪ್ರಮಾಣ ಪತ್ರ ಬೇಕು, ಆಧಾರ್ ಸಂಖ್ಯೆ ಕಡ್ಡಾಯವಲ್ಲ ಎಂದರು. ಈ ಬಗ್ಗೆ ಪ್ರಶ್ನಿಸಿದ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್, ಆಧಾರ್ ಸಂಖ್ಯೆ ಕಡ್ಡಾಯವಲ್ಲ ಎನ್ನುತ್ತೀರಿ, ಹಾಗಿದ್ದರೆ ಪೋಷಕರನ್ನು ಮಕ್ಕಳನ್ನು ಆಧಾರ್ ಕಾರ್ಡ್ ತನ್ನಿ ಎಂದು ಯಾಕೆ ಸತಾಯಿಸುತ್ತೀರಿ, ಕಡ್ಡಾಯವಲ್ಲ ಅಂದ ಮೇಲೆ ಅದನ್ನು ಬಿಟ್ಟು ಬಿಡಿ, ಮಕ್ಕಳಿಗೆ ವಿದ್ಯಾರ್ಥಿ ವೇತನ ಸಿಗಲಿ ಎಂದರು. ಇದಕ್ಕೆ ಜಿ.ಪಂ.ಸದಸ್ಯ ಸಂತೋಷ್ ಕುಮಾರ್ ಧ್ವನಿಗೂಡಿಸಿದರು. ಇದೇ ವೇಳೆ ಎಲ್ಲಾ ಸದಸ್ಯರು ಒಟ್ಟಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಅಗತ್ಯ ವಿಲ್ಲದ ದಾಖಲೆಗಳನ್ನು ಕೇಳಿ ಸಾರ್ವಜನಿಕರನ್ನು ಸತಾಯಿಸಬೇಡಿ, ಸರಿಯಾದ ಮಾಹಿತಿ ನೀಡಿ ಎಂದು ಆಗ್ರಹಿಸಿದರು.
ಡೆಂಗೆ ಗೆ ಮೆಸ್ಕಾಂ ಕಾರಣ;
ತಾಲೂಕಿನಲ್ಲಿ ಅಸಮರ್ಪಕ ವಿದ್ಯುತ್ ಕಡಿತದಿಂದಾಗಿ ಡೆಂಗ್ಯೂ ಸಹಿತ ವಿವಿಧ ಸಾಂಕ್ರಾಮಿಕ ರೋಗ ಹರಡಲು ಮೆಸ್ಕಾಂ ಇಲಾಖೆ ಕೂಡ ಪ್ರಮುಖ ಕಾರಣವಾಗಿದೆ ಎಂದು ಸದಸ್ಯ ದಿನೇಶ್ ಅಮ್ಟೂರು ಆರೋಪಿಸಿದರು. ಮೆಸ್ಕಾಂ ಇಲಾಖೆಯ ಮಾಹಿತಿ ವೇಳೆ ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳಿಗೆ 2 ಸಿಎಫ್ಎಲ್ ಬಲ್ಬ್ ಗಳನ್ನು ವಿತರಿಸಲಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿ ಸಬೆಗೆ ಮಾಹಿತಿ ನೀಡುತ್ತಿದ್ದಂತೆಯೇ, ತಾ.ಪಂ.ಸದಸ್ಯ ವಸಂತ ಅಣ್ಣಳಿಕೆ ಮಧ್ಯ ಪ್ರವೆಶಿಸಿ , ರಾಯಿ ಸಹಿತ ಅಕ್ಕಪಕ್ಕ ಕಳೆದ ಹಲವು ದಿನಗಳಿಂದ ವಿದ್ಯುತ್ ಕಡಿತ ಉಂಟಾಗುತ್ತಿದೆ. ಸಮರ್ಪಕವಾದ ವಿದ್ಯುತ್ತೇ ಇಲ್ಲದಿದ್ದರೆ ಈ ಬಲ್ಬ್ ಯಾರಿಗೆ ಎಂದು ಪ್ರಶ್ನೆಸಿದರು. ಇದಕ್ಕೆ ಸಮಜಾಯಿಷಿಕೆ ನೀಡಿದ ಮೆಸ್ಕಾಂ ಅಧಿಕಾರಿ, ಜೂನ್ ಆರಂಭದಿಂದ ಈ ಸಮಸ್ಯೆಯಾಗಿದೆ. ಮಳೆಗಾಳಿಯಿಂದಾಗಿ 450 ಕ್ಕೂ ಅಧಿಕ ಕಂಬಗಳು ಮುರಿದು ಬಿದ್ದಿದೆ, ಗುತ್ತಿಗೆದಾರರ ಮುಷ್ಕರ, ಲೈನ್ ಮ್ಯಾನ್ ಕೊರತೆ ಯಿಂದಾಗಿ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗಿಲ್ಲ ಎಂದರು. ಮುಂದಿನ ದಿನಗಳಲ್ಲಿ ಸೂಕ್ರವಾಗಿ ಸ್ಪಂದಿಸುವ ಭರವಸೆ ನೀಡಿದರು.
ತಾಲೂಕಿನಾದ್ಯಂತ ವ್ಯಾಪಿಸಿಕೊಂಡಿರುವ ಡೆಂಗ್ ಜ್ವರದ ಬಗ್ಗೆ ಯೂ ವಿಸ್ತೃತ ಚರ್ಚ್ ನಡೆಯಿತು. ಆರೋಗ್ಯಾಧಿಕಾರಿ ಡಾ.ಮಂಜುನಾಥ್ ವಿಷಯ ಪ್ರಸ್ತಾಪಿಸಿ, ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ, ಇಲಾಖೆ ವತಿಯಿಂದ ಫಾಗಿಂಗ್, ಸೊಳ್ಳೆ ನಿಯಂತ್ರಣ, ಕರಪತ್ರ ವಿತರಣೆಯ ಮೂಲಕ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ, ಆದರೆ 4 ಫಾಗಿಂಗ್ ಯಂತ್ರ ಮಾತ್ರ ನಮ್ಮಲ್ಲಿದೆ, ಅಗತ್ಯವಿರುವ ಚಿಕಿತ್ಸಾ ಸೌಲಭ್ಯಗಳಿಗೆ ಮಂಗಳೂರಿಗೆ ಕಳುಹಿಸಬೇಕಾಗುತ್ತದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಮಾಧವ ಮಾವೆ , ಅಧಿಕಾರಿಗಳು ನಿರ್ಲಕ್ಷ್ಯ ಮಾಡಬಾರದು, ಸವಲತ್ತುಗಳ ಬೇಡಿಕೆ ಇದ್ದರೆ ಮೇಲಧಿಕಾರಿಗಳಿಗೆ ತಿಳಿಸಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಆರೋಗ್ಯ ಇಲಾಖೆ ಡೆಂಗ್ಯೂ ನಿಯಂತ್ರಣಕ್ಕೆ ಸಂಬಂಧಿಸಿ ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಕೆಲ ಸದಸ್ಯರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಮಡ ಘಟನೆಗೂ ಸಭ ಸಾಕ್ಷಿಯಾಯಿತು.
ತಾ. ಕಛೇರಿಯಲ್ಲಿ ಬ್ರೋಕರ್ ಕಾಟ..
ಕಂದಾಯ ಇಲಾಖೆ ಕುರಿತಂತೆ ನಡೆಯುತ್ತಿದ್ದ ಚರ್ಚೆಯ ವೇಳೆ ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಹಿಡಿದುಕೊಂಡು ಬರುವಾಗ ಅವರನ್ನು ತಹಶೀಲ್ದಾರರ ಕಛೇರಿಯಲ್ಲಿ ಕಾಯಿಸದೆ ಸಂಬಂಧಪಟ್ಟ ಅಧಿಕಾರಿಗಳಿಂದ ತಕ್ಷಣ ಕೆಲಸವನ್ನು ಮಾಡಿಸಿಕೊಡಬೇಕು ಎಂದು ಸದಸ್ಯರಾದ ಆನಂದ ಶಂಭೂರು , ಐಡಾ ಸುರೇಶ್ ಹಾಗೂ ಮಹಮ್ಮದ್ ಶರೀಫ್ ಆಗ್ರಹಿಸಿದರು. ಇದಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆಯವರು ಇದು ಸಾಧ್ಯವಿಲ್ಲ ಎಂದು ಆಕ್ಷೇಪಿಸಿದಾಗ, ಸದಸ್ಯರೆಲ್ಲರೂ ಘರಂ ಆಗಿ ತಹಸೀಲ್ದಾರರ ಮೇಲೆ ಮುಗಿಬಿದ್ದರು.
ಕಂದಾಯ ಇಲಾಖೆಯಲ್ಲಿ ಬ್ರೋಕರ್ ಗಳು ಬಂದರೆ ಅವರ ಕೆಲಸ 5-10 ನಿಮಿಷದಲ್ಲಿ ಮಾಡಿಕೊಡಲಾಗುತ್ತದೆ, ಬಡಪಾಯಿಗಳು ಬಂದರೆ ಸತಾಯಿಸಲಾಗುತ್ತದೆ, ನಾವು ಚುನಾಯಿತ ಪ್ರತಿನಿಧಿಗಳು ನಾವು ಕೂಡ ಜನರ ಸಮಸ್ಯೆಯನ್ನೇ ಹಿಡಿದುಕೊಂಡು ಬರುತ್ತಿದ್ದೇವೆ, ಹಾಗಾಗಿ ನಮ್ಮ ಕೆಲಸವನ್ನು ಮೊದಲ ಆದ್ಯತೆಯಲ್ಲಿ ನಡೆಸಿಕೊಡಬೇಕೆಂದರು. ಕೊನೆಗೆಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ರವರು, ಜನಪ್ರತಿನಿಧಿಗಳ ಸೂಚನೆಯನ್ನು ಅಧಿಕಾರಿಗಳು ಪಾಲಿಸಿ, ಸ್ಪಂದಿಸಬೇಕು ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.
ಉಪಾಧ್ಯಕ್ಷೆ ವಿಲಾಸಿನಿ. ಸ್ಥಾಯಿಸಮಿತಿ ಅಧ್ಯಕ್ಷೆ ಐಡಾ ಸುರೇಶ್, ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂಡ, ತಹಶೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿದ್ದರು.
ಜಿ.ಪಂ.ಸದಸ್ಯರಾದ ಎಂ.ಎಸ್.ಮಹಮ್ಮದ್, ಸಂತೋಷ್ ಕುಮಾರ್ ಶೆಟ್ಟಿ, ಜಯಶ್ರೀ ಪುದು, ತಾ.ಪಂ.ಸದಸ್ಯರಾದ ಪದ್ಮಶೇಖರ್ ಜೈನ್, ರಮೇಶ್ ಕುದ್ಮೇರು, ಶೈಲಜಾ ಶೆಟ್ಟಿ, ಲವೀನಾ ಡಿ.ಸೋಜ, ಜ್ಯೂಲಿಯಾನ ಲೋಬೋ, ಎಫ್ರೆಮ್ ಸಿಕ್ವೇರಾ, ಪುಷ್ಪಲತಾ ಕರ್ಕೇರ. ಸಂಪತ್ ಕುಮಾರ್ ಶೆಟ್ಟಿ, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು

