ದೆಹಲಿ: 12 ವರ್ಷದ ಮಗುವನ್ನು ಏಕಾಂಗಿಯಾಗಿ ಅಪಹರಣ ಮಾಡಿದ 17ರ ಹರೆಯದ ಯುವಕನೊಬ್ಬ ಇಡೀ ಪೊಲೀಸ್ ಠಾಣೆಯನ್ನು ತನ್ನ ಬೆರಳ ತುದಿಯಲ್ಲಿ ಕುಣಿಯುವಂತೆ ಮಾಡಿದ್ದಾನೆ. ತನ್ನ ಒತ್ತೆಯಾಳನ್ನು ಚೆನ್ನಾಗಿಯೇ ನೋಡಿಕೊಂಡ ಆತ ಗುರುದ್ವಾರದಲ್ಲಿ ನಿಯಮಿತವಾಗಿ ಅವನಿಗೆ ಆಹಾರವನ್ನು ಪೂರೈಸಿದ್ದಾನೆ. ಆದರೆ ಅಲ್ಲಿಗೆ ಬನ್ನಿ, ಇಲ್ಲಿಗೆ ಬನ್ನಿ ಎಂದು ಮಗುವಿನ ತಂದೆಗೆ ದೂರವಾಣಿ ಕರೆ ಮಾಡಿ ಇಡೀ ಪೋಲಿಸ್ ಠಾಣೆಯವರನ್ನು ಆಟವಾಡಿಸಿ ಸುಸ್ತು ಹೊಡೆಯುವಂತೆ ಮಾಡಿದ್ದಾನೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ತನ್ನ 12ರ ಹರೆಯದ ಮಗ ಅಪಹರಣವಾಗಿದ್ದಾನೆ ಎಂದು ವೃತ್ತಿಯಲ್ಲಿ ಕಲ್ಲುಕುಟಿಗರಾಗಿರುವ ತಂದೆ ಶೀಶಪಾಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸರೈಕೇಲ್ ಖಾನ್ ಬಸ್ ಡಿಪೊನಲ್ಲಿ ರೂ 50,000 ತಂದಿಟ್ಟರೆ ಮಾತ್ರ ನಿನ್ನ ಮಗನನ್ನು ಬಿಡುಗಡೆ ಮಾಡುವುದಾಗಿ ಒಂದು PCO ದಿಂದ ಬೆದರಿಕೆ ಕರೆ ಬಂದಿತ್ತು ಎಂದು ಅವರು ದೂರಿದ್ದರು. ಅಪಹರಣಕಾರರು ಬರಲು ಹೇಳಿದ್ದ ಸ್ಥಳಕ್ಕೆ ಪೋಲಿಸರ ಜತೆಗೆ ಹೋದ ಶೀಶಪಾಲ್ಗೆ ಅಲ್ಲಿ ಯಾರೂ ಕೂಡ ಕಂಡುಬರಲಿಲ್ಲ. ಹಿಂತಿರುಗಿದ ಶೀಶಪಾಲ್ಗೆ ಮತ್ತೆ ಟೆಲಿಫೋನ್ ಕರೆ ಮಾಡಿದ ಅಪಹರಣಾಕಾರ ಗಾಝಿಯಾಬಾದ್ ಬಾರ್ಡರ್ಗೆ ಬರಲು ತಿಳಿಸಿದ.ಹೀಗೆ ಅನೇಕ ಸ್ಥಳಗಳನ್ನು ಆತ ಬದಲಾಯಿಸಿದ. ನಂತರ ಅಪಹರಣಕಾರ ನಾನು ಅಪಹರಣ ಮಾಡಿದ್ದು ನಿಜ, ಆದರೆ ಆತನನ್ನು ಬಿಟ್ಟಿದ್ದೇನೆ ಎಂದು ಹೇಳಿ ಪೋಲಿಸರ ದಾರಿ ತಪ್ಪಿಸಲು ಪ್ರಯತ್ನಿಸಿದ. ಕೊನೆಗೂ ಆತನನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾದರು.

