ಬಂಟ್ವಾಳ : ಬಿ.ಸಿ.ರೋಡಿನ ಮೇಲ್ಸೇತುವೆ ಪಕ್ಕದ ಹೊಂಡಗಳಿಂದ ಕೂಡಿರುವ ಸರ್ವೇಸ್ ರಸ್ತೆಗೆ ವಾರದೊಳಗೆ ಡಾಮರೀಕರಣ ನಡೆಸಿ ದುರಸ್ತಿಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ. ಶುಕ್ರವಾರ ಸಂಜೆ ಬಿ.ಸಿ.ರೋಡಿಗೆ ಆಗಮಿಸಿದ ಅವರು, ದುರಸ್ತಿಯಲ್ಲಿದ್ದ ಸರ್ವೆಸ್ ರಸ್ತೆಯನ್ನು ವೀಕ್ಷಿಸಿದರು. ಇದೇ ವೇಳೆ ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು ಹಾಗೂ ದೇವದಾಸ ಶೆಟ್ಟಿಯವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಗುತ್ತಿಗೆದಾರರು ಕಾರಣವೆಂದ ಯೋಜನಾ ನಿರ್ದೇಶಕರು ಗುತ್ತಿಗೆವಹಿಸಿಕೊಂಡಿದ್ದ ಜೆಎಂಸಿ ಕನ್ಸ್ಟ್ರಕ್ಷನ್ ನ ರಾಮ್ ಬಾಬು ರವರನ್ನು ತೀವ್ರ ತರಾಟೆಗೆ ತೆಗೆದುಕೊಂಡರಲ್ಲದೆ, ಮುಂದಿನ ಒಂದು ವಾರದೊಳಗೆ ಡಾಮರೀಕರಣ ನಡೆಸಿ ದುರಸ್ತಿಗೊಳಿಸುವಂತೆ ಸೂಚನೆ ನೀಡಿದ್ದಾರೆ. ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸರ್ವೇಸ್ ರಸ್ತೆಯನ್ನು ಡಾಮರೀಕರಣಗೊಳಿಸಿ ದುರಸ್ತಿಗೊಳಿಸಲು ಕಳೆದ ಒಂದು ತಿಂಗಳ ಹಿಂದೆಯೇ ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿತ್ತು.
ಆದರೆ ಕಾರ್ಮಿಕರ ಕೊರತೆಯನೆಪ ಹೇಳಿ ಕಾಮಗಾರಿ ನಡೆಸದೇ ಇದ್ದುದರಿಂದ ಸಮಸ್ಯೆ ಎದುರಾಗಿದೆ, ವಾರದೊಳಗೆ ಸಮಸ್ಯೆ ಬಗೆಹರಿಯುತ್ತದೆ ಎಂದು ಪ್ರಾಧಿಕಾರದ ಅಧಿಕಾರಿ ಅಜಿತ್ ಮಾಧ್ಯಮದವರಿಗೆ ತಿಳಿಸಿದರು. ಪುರಸಭಾ ಸದಸ್ಯರಾದ ಇಕ್ಬಾಲ್, ವಾಸುಪೂಜಾರಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.






